Asianet Suvarna News Asianet Suvarna News

ಸಮಾಜಕ್ಕೆ ಮಾದರಿಯಾದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್'ನ ಪ್ರತಿಷ್ಠಿತ ‘ಶೌರ್ಯ ಪ್ರಶಸ್ತಿ’

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರ ಸ್ಥಂಭಗಳಿದ್ದಂತೆ. ಇಂದು ಶಾಸಕಾಂಗದಿಂದ ನಮ್ಮನ್ನು, ಕಾರ್ಯಾಂಗದಿಂದ ಅಧಿಕಾರಿಗಳನ್ನು ಕರೆಸಿ ಕನ್ನಡಪ್ರಭ- ಸುವರ್ಣ ನ್ಯೂಸ್ ಸಂಸ್ಥೆಯು ದೊಡ್ಡ ಸಾಹಸಿಗರನ್ನು ನೋಡಿ ಪರಿಚಯ ಮಾಡಿಕೊಳ್ಳುವ ಪವಿತ್ರ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.

 

Suvarna KP Shourya award Presentation

ಬೆಂಗಳೂರು(ಜೂ.24): ತಮ್ಮ ನಿತ್ಯ ಜೀವನದಲ್ಲಿ ಜೀವದ ಹಂಗು ತೊರೆದು ಮತ್ತೊಬ್ಬರ ಪ್ರಾಣ ಉಳಿಸುವ ಮೂಲಕ ಸಮಾಜಕ್ಕೆ ಮಾದರಿಯಾದ 20 ಮಂದಿ ಶೂರರನ್ನು ಶುಕ್ರವಾರ ಕನ್ನಡಪ್ರಭ-ಸುವರ್ಣ ನ್ಯೂಸ್‌ನ ಪ್ರತಿಷ್ಠಿತ ‘ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಬೆಂಗಳೂರು ನಗರದ ಪುರಭವನದಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಇತರರ ಪ್ರಾಣ ಕಾಪಾಡಿದ ಹದಿನೆಂಟು ಮಂದಿ ಸಾಧಕರಿಗೆ ‘ಶೌರ್ಯ ಪ್ರಶಸ್ತಿ’ಹಾಗೂ ಬೇರೊಬ್ಬರ ಪ್ರಾಣ ಉಳಿಸುವ ಪ್ರಯತ್ನದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಇಬ್ಬರು ಹುತಾತ್ಮರಿಗೆ ‘ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು’ ಗೃಹ ಸಚಿವ ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅತಿಥಿಗಳು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಜಿ. ಪರಮೇಶ್ವರ್, ಜೀವದ ಹಂಗು ತೊರೆದು ಬೇರೊಬ್ಬರನ್ನು ರಕ್ಷಿಸಿರುವ ಈ ಮಕ್ಕಳು, ವ್ಯಕ್ತಿಗಳು ಹಾಗೂ ಸಾಧಕರು ಅಭಿನಂದನಾರ್ಹರು. ಇಂತಹವರನ್ನು ಸಮಾಜದ ಮುಂದೆ ನಿಲ್ಲಿಸಿ ರಾಜ್ಯಕ್ಕೆ ಪರಿಚಯಿಸಿರುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಯತ್ನವು ಅನುಕರಣೀಯ ಎಂದು ಶ್ಲಾಘಿಸಿದರು.

ಪ್ರಸ್ತುತ ಮನುಷ್ಯರು ಸೂಕ್ಷ್ಮ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ. ಅಪಘಾತಕ್ಕೆ ತುತ್ತಾದ ವ್ಯಕ್ತಿಯು ರಕ್ತದ ಮಡುವಿನಲ್ಲಿ ನರಳುತ್ತಿದ್ದರೆ ಮೊಬೈನ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವ ಘಟನೆಗಳು ನಡೆಯುತ್ತಿವೆ. ಅಂತಹವರು ಕಷ್ಟದಲ್ಲಿರುವವರ ಪ್ರಾಣ ರಕ್ಷಿಸುವ ಧೈರ್ಯ ತೋರಿದ್ದರೆ ಇಂದು ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯಪ್ರಶಸ್ತಿ ಪಡೆಯುವ ಸಾಲಿನಲ್ಲಿ ನಿಲ್ಲುತ್ತಿದ್ದರು. ಇನ್ನಾದರೂ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಗುಣ ಜನರಿಗೆ ಬರಲಿ ಎಂದರು.

ಈ ಎಲ್ಲಾ ಶೌರ್ಯ ಪ್ರಶಸ್ತಿ ಪುರಸ್ಕೃತರು ಇತರರಿಗೆ ಮಾದರಿಯಾಗಿದ್ದಾರೆ. ಯುವಕರಿಗೆ ನಿತ್ಯ ಜೀವನದಲ್ಲಿ ಈ ರೀತಿ ಶೌರ್ಯ ಪ್ರದರ್ಶಿಸಲು ಸಾಕಷ್ಟು ಅವಕಾಶ ಒದಗಿಬರುತ್ತದೆ. ಆಗ ಧನಾತ್ಮಕವಾಗಿ ಸ್ಪಂದಿಸಲು ಇದು ಪ್ರೇರಣೆ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ವಾಹಿನಿ-ಪತ್ರಿಕೆಯ ಕಾರ್ಯವನ್ನು ಹೊಗಳಿದ ಸಚಿವರು

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರ ಸ್ಥಂಭಗಳಿದ್ದಂತೆ. ಇಂದು ಶಾಸಕಾಂಗದಿಂದ ನಮ್ಮನ್ನು, ಕಾರ್ಯಾಂಗದಿಂದ ಅಧಿಕಾರಿಗಳನ್ನು ಕರೆಸಿ ಕನ್ನಡಪ್ರಭ- ಸುವರ್ಣ ನ್ಯೂಸ್ ಸಂಸ್ಥೆಯು ದೊಡ್ಡ ಸಾಹಸಿಗರನ್ನು ನೋಡಿ ಪರಿಚಯ ಮಾಡಿಕೊಳ್ಳುವ ಪವಿತ್ರ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಇವರಿಲ್ಲದಿದ್ದರೆ ರಾಜ್ಯ ಕತ್ತಲಾಗುತ್ತಿತ್ತು!

ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಈ ನಡುವೆ ನಾವು ಮಾಡುವ ಕೆಲಸ ಮಾತ್ರ ಉಳಿಯುತ್ತದೆ. ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಶರಾವತಿ ವಿದ್ಯುತಾಗಾರದ ಬೆಂಕಿ ಆಕಸ್ಮಿಕದಲ್ಲಿ ನಾಲ್ಕು ಮಂದಿ ಅಧಿಕಾರಿಗಳನ್ನು ಪ್ರಾಣ ಲೆಕ್ಕಿಸದೆ ಕಾಪಾಡಿದ ರಾಮು, ಮುಕ್ತಿಯಾರ್, ಅಹಮ್ಮದ್, ಚಿದಂಬರ್ ಜೈನ್ ಇದ್ದಾರೆ. ಆದರೆ, ವಾಸ್ತವವಾಗಿ ಅವರು ಆ ದಿನ ಸಾಹಸ ಮೆರೆಯದಿದ್ದರೆ ಇಡೀ ರಾಜ್ಯ ಕತ್ತಲಲ್ಲಿರಬೇಕಿತ್ತು ಎಂದು ಹೇಳಿದರು.

ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 1200 ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಇವರು ಸಮಯಪ್ರಜ್ಞೆ ಮೆರೆಯದಿದ್ದರೆ ಆ ದಿನ ಸಂಪೂರ್ಣ ಸುಟ್ಟು ಹೋಗುತ್ತಿತ್ತು. ಇದರಿಂದ ಬೊಕ್ಕಸಕ್ಕೆ 8 ರಿಂದ 10 ಸಾವಿರ ಕೋಟಿ ನಷ್ಟ ಉಂಟಾಗುತ್ತಿತ್ತು. ಜತೆಗೆ 4 ವರ್ಷ ಅಲ್ಲಿಂದ ವಿದ್ಯುತ್ ಉತ್ಪಾದನೆ ಆಗುತ್ತಿರಲಿಲ್ಲ. ಹೀಗಾಗಿದ್ದರೆ ರಾಜ್ಯದಲ್ಲಿ ಕತ್ತಲೆ ಆವರಿಸಬೇಕಾಗಿತ್ತು. ಒಬ್ಬರ ಶೌರ್ಯ ಎಷ್ಟು ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಇಂತಹವರನ್ನು ಗುರುತಿಸಿ ಗೌರವಿಸಿರುವುದು ಅಭಿನಂದನೀಯ ಎಂದರು.

ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಈ ಪುಟ್ಟ ಮಕ್ಕಳ ಶೌರ್ಯ ಗಾದೆ ಕೇಳಿದರೆ ನಾನು ಯಾವುದೇ ಸಾಧನೆ ಮಾಡಿಲ್ಲ ಎನಿಸುತ್ತಿದೆ. ಸ್ವತಃ ೨೫ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕನ ಮಗಳಾಗಿ ಪುಟ್ಟ ಮಕ್ಕಳ ಸಾಧನೆ ಹೆಮ್ಮೆ ಎನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಗಿಲ್ ಹೀರೋ ನವೀನ್ ನಾಗಪ್ಪ, ನಾಗರೀಕರು ಪ್ರಾಣ ಲೆಕ್ಕಿಸದೆ ಶೌರ್ಯ ಪ್ರದರ್ಶಿಸಿದ್ದಾರೆ. ಇವನ್ನು ಬೆಳಕಿಗೆ ತಂದು ಉತ್ತಮ ಕಾರ್ಯ ಮಾಡಲಾಗುತ್ತಿದೆ. ಈ ಮಹತ್ವದ ಕಾರ್ಯದಲ್ಲಿ ನಾನು ಹಾಗೂ ನಟ ದೇವರಾಜ್ ಅವರನ್ನು ಆಯ್ಕೆ ಸಮಿತಿಗೆ ನೇಮಿಸಿದ್ದು ಖುಷಿ ನೀಡಿದೆ ಎಂದರು.

ಕನ್ನಡಪ್ರಭ ಪ್ರಧಾನ ಸಂಪಾದಕ ರವಿಹೆಗಡೆ ಮಾತನಾಡಿ, ಮಾಧ್ಯಮಗಳು ಕೆಟ್ಟದ್ದನ್ನು ಮಾತ್ರ ಬಿಂಬಿಸುತ್ತವೆ ಎಂಬ ಮಾತಿದೆ. ಇದೀಗ ಶೌರ್ಯ ಪ್ರಶಸ್ತಿ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಶೌರ್ಯ ಪ್ರದರ್ಶಿಸುವವರ ಹಾಗೂ ಪರರಿಗೆ ನೆರವಾಗುವವರ ಸಂಖ್ಯೆ ಹೆಚ್ಚಾಗಲಿ, ಅಂತಹವರಿಗೆ ಈ ಸಾಧಕರು ಮಾದರಿಯಾಗಲಿ ಎಂಬ ಕಾರಣಕ್ಕೆ ಮಾಡುತ್ತಿದ್ದೇವೆ ಎಂದರು.

ಈ ಮೊದಲೂ ಸಹ ಮಹಿಳಾ ಸಾಧಕಿ, ಕಿರಿಯ ಸಂಪಾದಕ, ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿದ್ದೇವೆ. ಪರರಿಗೆ ಸಹಾಯ ಮಾಡುವವರ ಸಂಖ್ಯೆ ಹೆಚ್ಚಾಗಲಿ ಎಂಬ ಕಾರಣಕ್ಕೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದು ಪ್ರಶಸ್ತಿ ಪ್ರದಾನದ ಹಿನ್ನೆಲೆ ವಿವರಿಸಿದರು.

ಈ ವೇಳೆ ಗೃಹ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಹೆಚ್ಚವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಕನ್ನಡಪ್ರಭ-ಸುವರ್ಣ ನ್ಯೂಸ್ ಸಿಇಒ ಕೌಶಿಕ್ ಘೋಷ್, ಏಷ್ಯಾನೆಟ್ ನ್ಯೂಸ್ ನೆಟವರ್ಕ್ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ಅಮಿತ್ ಗುಪ್ತಾ, ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ಸೇರಿದಂತೆ ಹಲವರು ಹಾಜರಿದ್ದರು.

* ಶೌರ್ಯ ಪ್ರಶಸ್ತಿ ಪುರಸ್ಕೃತರು

ಗೋಪಾಲ ಮೊಗೇರ              - ಭಟ್ಕಳ, ಉತ್ತರ ಕನ್ನಡ ಜಿಲ್ಲೆ

ಕಾರ್ತಿಕ್ ಸಿಂಗ್      - ತುಮಕೂರು

ಪರಸಪ್ಪ ಯಲ್ಲಪ್ಪ    - ಗದಗ

ಪ್ರತೀಕ್ಷಾ - ಬಂಟ್ವಾಳ, ದಕ್ಷಿಣ ಕನ್ನಡ

ರಾಜಶೇಖರ ಮೇಟಿ               - ಯಾದಗಿರಿ

ರೇಣುಕಾ, ರೂಪ     - ಸೈದಾಪುರ, ಯಾದಗಿರಿ

ಸಹನೇಶ್               - ರಾಮನಗರ

ಶ್ರೇಯಸ್ ಎನ್. ರಾವ್ ಮತ್ತು ಶಶಿಕುಮಾರ್ ಜಿ.ಎಂ.           - ಮೈಸೂರು

ರಾಮು, ಮುಕ್ತಿಯಾರ್ ಅಹಮ್ಮದ್, ಚಿದಂಬರ್ ಜೈನ್ - ಶಿವಮೊಗ್ಗ

ನರಸಿಂಹ ಮೂರ್ತಿ - ಮಾಗಡಿ, ರಾಮನಗರ

ಸಿ.ಡಿ. ಮಂಜುನಾಥ್               - ಪಾವಗಡ, ತುಮಕೂರು

ಸುನೀತಾ                - ಶ್ರೀನಿವಾಸಪುರ, ಕೋಲಾರ

ಎಚ್.ಸಿ. ಚಂದ್ರಪ್ಪ   - ಕುಣಗಿಲ್ ತುಮಕೂರು

ವಿನಯ್  - ಚಾಮರಾಜನಗರ

ಮರಣೋತ್ತರ ಪ್ರಶಸ್ತಿ

ಮಹೇಶ್ ಕುಡುಸಕರ್            - ಬೆಳಗಾವಿ

ಸುಕನ್ಯಾ ಕೆ.ಎಸ್.  - ಚಿಕ್ಕಬಳ್ಳಾಪುರ

 

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios