Asianet Suvarna News Asianet Suvarna News

ಕನ್ನಡಪ್ರಭ-ಸುವರ್ಣನ್ಯೂಸ್ ಸಾಧಕಿಯರಿಗೆ ಸಮ್ಮಾನ

ಹತ್ತು ಸಾಧನಾ ಕ್ಷೇತ್ರ ಹಾಗೂ 1 ತೀರ್ಪುಗಾರರ ವಿಶೇಷ ಪ್ರಶಸ್ತಿ ಜತೆಗೆ ಒಟ್ಟು ಹನ್ನೆರಡು ಮಂದಿಗೆ ಬೆಂಗಳೂರಿನ ಕಾಸಿಯಾ ಉದ್ಯೋಗ ಭವನದಲ್ಲಿ ನಡೆದ ‘ಮಹಿಳಾ ಸಾಧಕಿಯರು ಪ್ರಶಸ್ತಿ’ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Suvarna Kannada Prabha Award For Women achievers
  • Facebook
  • Twitter
  • Whatsapp

ಬೆಂಗಳೂರು(ಏ.29): ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸುವ ಸಲುವಾಗಿ ‘ಸುವರ್ಣನ್ಯೂಸ್-ಕನ್ನಡಪ್ರಭ’ ಹಮ್ಮಿಕೊಂಡಿದ್ದ ‘ಮಹಿಳಾ ಸಾಧಕಿಯರು ಪ್ರಶಸ್ತಿ-2017’ ಸ್ಪರ್ಧೆಯಲ್ಲಿ ತೀರ್ಪುಗಾರರ ಸಮಿತಿ ಆಯ್ಕೆ ಮಾಡಿದ ಅಂತಿಮ 12 ಮಂದಿ ಮಹಿಳಾ ಸಾಧಕಿಯರಿಗೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹತ್ತು ಸಾಧನಾ ಕ್ಷೇತ್ರ ಹಾಗೂ 1 ತೀರ್ಪುಗಾರರ ವಿಶೇಷ ಪ್ರಶಸ್ತಿ ಜತೆಗೆ ಒಟ್ಟು ಹನ್ನೆರಡು ಮಂದಿಗೆ ಬೆಂಗಳೂರಿನ ಕಾಸಿಯಾ ಉದ್ಯೋಗ ಭವನದಲ್ಲಿ ನಡೆದ ‘ಮಹಿಳಾ ಸಾಧಕಿಯರು ಪ್ರಶಸ್ತಿ’ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಮ್ಮ ದೇಶದಲ್ಲಿ ಹೆಣ್ಣಾಗಿ ಜನಿಸುವುದೇ ದೊಡ್ಡ ಸಾಧನೆ. ಲಿಂಗ ಅಸಮಾನತೆ, ಭ್ರೂಣಹತ್ಯೆ, ಹೆಣ್ಣು ಮಗು ಬೇಡ ಎಂಬ ಸಂಕುಚಿತ ಮನೋಭಾವನೆ ನಡುವೆ ಹೆಣ್ಣಾಗಿ ಜನಿಸುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಹೀಗಾಗಿ ಮಹಿಳೆಯರು ಎಂದರೆ ಅದು ಸಾಧನೆಯೇ. ಅವರಿಗೆ ಬೇರೆ ವಿಶೇಷಣ ಬೇಕಿಲ್ಲ. ಆದರೆ, ಪುರುಷರಿಗೂ ಮಾದರಿಯಾಗುವಂತಹ ಸಾಧನೆ ಮಾಡಿದ ಮಹಿಳೆಯರನ್ನು ಖಂಡಿತ ಗೌರವಿಸಬೇಕು. ಹೀಗಾಗಿ ಪುರುಷರಿಗೂ ಮಾದರಿಯಾಗಬಲ್ಲ ಸಾಧನೆ ಮಾಡಿದ ಸಾಧಕಿಯರನ್ನು ಗುರುತಿಸಲು ಸುವರ್ಣನ್ಯೂಸ್-ಕನ್ನಡಪ್ರಭ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಮಾಧ್ಯಮ ಎಂದರೆ ನಮಗೂ ಒಂದು ಸಾಮಾಜಿಕ ಜವಬ್ದಾರಿ ಇದೆ. ಅದರಲ್ಲಿ ಅತ್ಯುತ್ತಮ ಸಾಮಾಜಿಕ ಜವಬ್ದಾರಿಯ ಮಾದರಿ ತೋರಿಸುವುದು ನಮ್ಮ ಉದ್ದೇಶ. ಹೀಗಾಗಿ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅಧ್ಯಕ್ಷತೆಯಲ್ಲಿ ಸುಧಾರಾಣಿ, ಮಾಳವಿಕಾ ಅವರ ಆಯ್ಕೆ ಸಮಿತಿ ಹಲವು ಮಾನದಂಡ ಇಟ್ಟುಕೊಂಡು ವಸ್ತುನಿಷ್ಠವಾಗಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.

ರೈತ ಮಹಿಳೆಗೆ ಗೌರವ ಅತ್ಯುತ್ತಮ ಕೆಲಸ

ಮೊದಲಿಗೆ ಕೃಷಿ ವಿಭಾಗದ ಪ್ರಶಸ್ತಿಗೆ ಭಾಜನರಾದ ಲಕ್ಷ್ಮೀ ಭಾಯಿ ಝಳಪಿ ಅವರ ಹೆಸರು ಘೋಷಿಸಿ ಮಾತನಾಡಿದ ನಟಿ ತಾರಾ ಅನೂರಾಧ, ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತನಿಗೆ ನಾವು ಏನೂ ಮಾಡುತ್ತಿಲ್ಲ. ರೈತ ಪುರುಷರ ಬಗ್ಗೆ ಮಾತ್ರ ಮಾತನಾಡುತ್ತೇವೆ. ರೈತ ಪುರುಷನ ಹಿಂದೆ ಸಮಾನವಾಗಿ ದುಡಿಯುವ ರೈತ ಮಹಿಳೆಗೆ ಮನ್ನಣೆ ಸಿಗುತ್ತಿಲ್ಲ.

ರೈತ ಆತ್ಮಹತ್ಯೆಗೆ ಗುರಿಯಾದರೆ ದುಡ್ಡಿನ ಮೂಲಕ ಬೆಲೆ ಕಟ್ಟುತ್ತೇವೆ. ಆದರೆ, ಅವರ ಹಿಂದಿನ ರೈತ ಮಹಿಳೆಯನ್ನು ಗುರುತಿಸುವುದಿಲ್ಲ. ಅವರ ದುಃಖ, ನೋವಿನಲ್ಲಿ ಭಾಗಿಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತ ಮಹಿಳೆಯನ್ನು ಗುರುತಿಸಿ ಗೌರವಿಸುತ್ತಿರುವ ಕನ್ನಡಪ್ರಭ-ಸುವರ್ಣನ್ಯೂಸ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ರಂಗಭೂಮಿ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾದ ನಯನಾ ಸೂಡಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ರಂಗ ಕಲಾವಿದೆ ಅರುಂಧತಿ ನಾಗ್, ಎಲ್ಲದಕ್ಕೂ ದುಡ್ಡೇ ಮಾನದಂಡ ಆಗಬಾರದು. ದುಡ್ಡಿನ ಮಾನದಂಡದಿಂದ ಅಳತೆ ಮಾಡಿದರೆ ಕಲೆ ಉಳಿಯುವುದಿಲ್ಲ. ರಂಗಭೂಮಿ ಕಡೆಗೆ ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಪ್ರಶಸ್ತಿ ಪಡೆದವರ ಸಾಧನೆ

ಹೊಸ ಬದನೆಕಾಯಿ ತಳಿ ಸಂಶೋಸಿ ಬೆಳೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿರುವ ಲಕ್ಷ್ಮೀ ಭಾಯಿ ಝಳಪಿ ಅವರಿಗೆ ಕೃಷಿ ವಿಭಾಗದಲ್ಲಿ ಹಾಗೂ ರಂಗಭೂಮಿ ಸಾಧನೆಗೆ ನಯನಾ ಸೂಡಾ ಅವರಿಗೆ ಪ್ರಶಸ್ತಿ ಲಭಿಸಿತು.

ಕ್ರೀಡಾ ವಿಭಾಗದಲ್ಲಿ ಹಿಮಾಲಯ ಪರ್ವತಾರೋಹಣ ಮಾಡಿದ ನಂದಿತಾ, ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ವೇಗವಾಗಿ ಚಿತ್ರ ಬಿಡಿಸುವ ಕಲೆ ರೂಢಿಸಿಕೊಂಡಿರುವ ಶಬರಿ ಗಾಣಿಗ, ಹುಡುಗಿಯರಿಗೆ ಶಿಕ್ಷಣ ಕೊಡಿಸುವುದೇ ತಪ್ಪು ಎಂಬಂತಿದ್ದ ಕಾಲದಲ್ಲಿ ಹುಡುಗಿಯರಿಗೆ ಪ್ರತ್ಯೇಕ ಶಾಲೆ ತೆರೆದ ಬಿಎಸ್‌ವಿಪಿ ಕಾಲೇಜು ಸಂಸ್ಥಾಪಕಿ ಪುಟ್ಟಮ್ಮ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ, 40 ಸಾವಿರಕ್ಕೂ ಹೆಚ್ಚು ಶವ ಸಂಸ್ಕಾರ ನಡೆಸಿದ ಉಡುಪಿಯ ವನಜಾ ಪೂಜಾರಿ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ, ಇಸ್ರೋ ಉಪಗ್ರಹ ಉಡ್ಡಯನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿ.ಕೆ. ಅನೂರಾಧಾ ಅವರಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಣ್ಣಿನ ಸಮಸ್ಯೆ ಮೆಟ್ಟಿ ನಿಂತು ಭರತನಾಟ್ಯ ಕಲಾವಿದೆಯಾದ ಟಿ.ಜೆ. ನಿವೇದಿತಾ, ಬೆಳವಣಿಗೆ ಕುಂಠಿತವಾಗಿ ಮಗುವಿನಂತೆಯೇ ಇದ್ದರೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಪ್ಟ್'ವೇರ್ ಇಂಜಿನಿಯರ್ ರೇಖಾ (ಮಂಡ್ಯ) ಅವರಿಗೆ ವಿಶೇಷ ಚೇತನ ವಿಭಾಗದ ಜಂಟಿ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಪುರಸ್ಕೃತರ ಪಟ್ಟಿ

1. ಕೃಷಿ ಕ್ಷೇತ್ರ      - ಲಕ್ಷ್ಮಿಬಾಯಿ ಝಲಪಿ, ಬಾಗಲಕೋಟೆ

2. ವಿಜ್ಞಾನ ಮತ್ತು ತಂತ್ರಜ್ಞಾನ        - ಟಿ.ಕೆ.ಅನೂರಾಧಾ, ಬೆಂಗಳೂರು

3. ಕ್ರೀಡೆ - ನಂದಿತಾ, ಹುಬ್ಬಳ್ಳಿ

4.ಕಲೆ, ಸಂಸ್ಕೃತಿ  - ಶಬರಿ ಗಾಣಿಗ, ಮಂಗಳೂರು

5.ವಿಶೇಷ ಚೇತನ - ರೇಖಾ ಮಂಡ್ಯ ಮತ್ತು ನಿವೇದಿತಾ ಟಿ.ಜೆ. ಬೆಂಗಳೂರು (ಜಂಟಿ ಪ್ರಶಸ್ತಿ)

6.ರಂಗಭೂಮಿ     - ನಯನಾ ಸೂಡಾ, ಬೆಂಗಳೂರು

7.ಶಿಕ್ಷಣ  - ಪುಟ್ಟಮ್ಮ, ಬೆಂಗಳೂರು

8.ಸಮಾಜಸೇವೆ   - ವನಜಾ ಪೂಜಾರಿ, ಉಡುಪಿ

9.ತೀರ್ಪುಗಾರರ ವಿಶೇಷ ಪ್ರಶಸ್ತಿ      - ಗೌರಿ ನಾಯ್ಕ , ಶಿರಸಿ

ಏಷ್ಯಾನೆಟ್‌ನಿಂದ ‘ರಿಪಬ್ಲಿಕ್

ಏಷ್ಯಾನೆಟ್ ನ್ಯೂಸ್ ಗ್ರೂಪ್‌ನ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ಅಮಿತ್ ಗುಪ್ತಾ ಅವರು ಏಷ್ಯಾನೆಟ್ ನ್ಯೂಸ್ ಸಮೂಹದಿಂದ ಹೊಸದಾಗಿ ಪ್ರಾರಂಭವಾಗಲಿರುವ ‘ರಿಪಬ್ಲಿಕ್’ ಸುದ್ದಿವಾಹಿನಿಯನ್ನು ಘೋಷಿಸಿದರು. ಅಲ್ಲದೆ ರಿಪಬ್ಲಿಕ್ ಸುದ್ದಿವಾಹಿನಿಗೆ ಖ್ಯಾತ ಪತ್ರಕರ್ತ ಹಾಗೂ ವಾರ್ತಾ ವಾಚಕ ಅರ್ನಬ್ ಗೋಸ್ವಾಮಿ ನೇತೃತ್ವ ವಹಿಸುತ್ತಿರುವುದನ್ನು ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಿದರು.

Follow Us:
Download App:
  • android
  • ios