ಸುಷ್ಮಾಜಿ ನೀವು ನಮ್ಮ ಪ್ರಧಾನಿಯಾಗಿರುತ್ತಿದ್ದಿದ್ದರೆ ಈ ದೇಶ ಬದಲಾಗುತ್ತಿತ್ತು! ಎಂದು ಪಾಕಿಸ್ತಾನದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಕೊಂಡಾಡಿದ್ದಾರೆ.
ಇಸ್ಲಮಾಬಾದ್(ಜು.28): ಸುಷ್ಮಾಜಿ ನೀವು ನಮ್ಮ ಪ್ರಧಾನಿಯಾಗಿರುತ್ತಿದ್ದಿದ್ದರೆ ಈ ದೇಶ ಬದಲಾಗುತ್ತಿತ್ತು! ಎಂದು ಪಾಕಿಸ್ತಾನದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೊಂಡಾಡಿದ್ದಾರೆ.
ಹಿಜಬ್ ಆಸಿಫ್ ಎಂಬ ಪಾಕಿಸ್ತಾನ ಮಹಿಳೆ ಭಾರತದ ವಿಸಾ ಬಯಸಿ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. ತಕ್ಷಣ ಸ್ಪಂದಿಸಿದ ಸುಷ್ಮಾ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್'ಗೆ ಆಸಿಫ್'ಗೆ ವಿಸಾ ದೊರಕಿಸುವ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದರು. ವಿಸಾ ದೊರಕಿದ ಖುಷಿಯಲ್ಲಿ ಟ್ವೀಟ್ ಮಾಡಿರುವ ಆಸಿಫ್, ಒಂದು ವೇಳೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಪ್ರಧಾನಿಯಾಗಿರುತ್ತಿದ್ದರೆ ದೇಶದ ವ್ಯವಸ್ಥೆಯೇ ಬದಲಾಗುತ್ತಿತ್ತು ಎಂದಿದ್ದಾರೆ.
ಸುಷ್ಮಾ ಸ್ವರಾಜ್ ನಿಮ್ಮನ್ನು ಏನೆಂದು ಕರೆಯಲಿ, ಸುಪರ್ ವುಮನ್? ದೇವತೆ? ನಿಮ್ಮ ಔದಾರ್ಯ ಹೊಗಳಲು ನನ್ನ ಬಳಿ ಪದಗಳಿಲ್ಲ. ನಿಮ್ಮನ್ನು ತುಂಬ ಪ್ರೀತಿಸುತ್ತೇನೆ. ಆನಂದಭಾಷ್ಪಗಳನ್ನು ತಡೆಯಲಾಗುತ್ತಿಲ್ಲ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ಸಲುವಾಗಿ ಭಾರತದ ವಿಸಾ ಬಯಸಿ ಆಸಿಫ್ ಟ್ವೀಟ್ ಮಾಡಿದ್ದರು. ಇಸ್ಲಮಾಬಾದ್'ನಲ್ಲಿರುವ ಭಾರತದ ಹೈಕಮಿಷನರ್ ಗೌತಮ್ ಬಂಬಾವಾಲೆ ಅವರಿಗೆ ಆಸಿಫ್'ಗೆ ವಿಸಾ ದೊರಕಿಸಿಕೊಡುವಂತೆ ನಿರ್ದೇಶನ ನೀಡಿದ್ದರು. ಇಸ್ಲಮಾಬಾದ್ನಲ್ಲಿ ಡೆಪ್ಯೂಟಿ ಹೈಕಮಿಷನರ್ ಜತೆ ಮಾತನಾಡಿದ್ದೇನೆ. ನನ್ನ ಅನಾರೋಗ್ಯದ ಪ್ರಸ್ತುತ ಸ್ಥಿತಿ ವಿವರಿಸಿದ್ದೇನೆ. ನಿಮ್ಮ ಅನುಮತಿ ಸಿಕ್ಕಿದರೆ ತಕ್ಷಣ ವಿಸಾ ಒದಗಿಸಿಕೊಡುತ್ತೇನೆ ಎಂದಿರುವುದಾಗಿ ಆಸಿಫ್ ಈ ಮೊದಲು ಟ್ವೀಟ್ ಮಾಡಿದ್ದರು. ಅದಕ್ಕೆ 'ಗೌತಮ್ ಬಂಬಾವಾಲೆಜಿ ಅವರಿಗೆ ವಿಸಾ ದೊರಕಿಸಿಕೊಡಿ' ಎಂದು ಸುಷ್ಮಾ ಪ್ರತಿಕ್ರಿಯಿಸಿದ್ದರು.
ಆಸಿಫ್ ಗಂಭೀರ ಯಕೃತ್ತಿನ ಖಾಯಿಲೆಯಿಂದ ಬಳಲುತಿದ್ದು, ಶೀಘ್ರ ಚಿಕಿತ್ಸೆ ಅಗತ್ಯವಿದೆ. ಈ ಹಿಂದೆ ಹೃದಯ ರೋಗದಿಂದ ಬಳಲುತ್ತಿದ್ದ 2.5 ವರ್ಷದ ಮಗುವಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬರಿಗೆ ವಿಸಾ ದೊರಕಿಸಿಕೊಟ್ಟಿದ್ದರು.
