Asianet Suvarna News Asianet Suvarna News

ಬಾಡಿಗೆ ತಾಯ್ತನದ 'ವಾಣಿಜ್ಯ ದಂಧೆ'ಗೆ ಬ್ರೇಕ್: ಸೆಲೆಬ್ರಿಟಿಗಳಿಗೆ ಕಷ್ಟ ಕಷ್ಟ!

ಸಂಬಂಧಿಕರು ಮಾತ್ರ ಮಗು ಹೆತ್ತು ಕೊಡಬಹುದು| ಬಂಧುಗಳು ಇಲ್ಲದಿದ್ದರೆ ದತ್ತು ಪಡೆಯಲಷ್ಟೇ ಅವಕಾಶ| ಸೆಲೆಬ್ರಿಟಿಗಳು ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅಂಕುಶ| ಗದ್ದಲದ ನಡುವೆಯೇ ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರ

Surrogacy Regulation Bill Passed In Lok Sabha
Author
New Delhi, First Published Dec 20, 2018, 10:16 AM IST

ನವದೆಹಲಿ[ಡಿ.20]: ಬಾಡಿಗೆ ತಾಯ್ತನವು ‘ದಂಧೆ’ಯಾಗಿ ಮಾರ್ಪಟ್ಟಿರುವುದನ್ನು ಮನಗಂಡ ಸಂಸತ್ತು, ‘ವಾಣಿಜ್ಯ ಉದ್ದೇಶದ’ ಬಾಡಿಗೆ ಯಾಯ್ತನ ನಿಷೇಧಿಸುವ ಮಹತ್ವದ ವಿಧೇಯಕಕ್ಕೆ ಅಂಗೀಕಾರ ನೀಡಿದೆ. ಲೋಕಸಭೆಯು ಬುಧವಾರ ಗದ್ದಲದ ನಡುವೆಯೇ ಮಸೂದೆ ಅಂಗೀಕರಿಸಿದೆ.

ಈಗಾಗಲೇ ವಿವಾಹವಾಗಿರುವ ಮತ್ತು ಈಗಾಗಲೇ ಮಗು ಹೊಂದಿರುವ ರಕ್ತ ಸಂಬಂಧಿಯನ್ನು ಬಾಡಿಗೆ ತಾಯಿ ಮಾಡಿಕೊಳ್ಳುವ ಮೂಲಕ ಮಕ್ಕಳಿಲ್ಲದ ದಂಪತಿ ಮಗು ಹೊಂದಲು ವಿಧೇಯಕ ಅವಕಾಶ ಮಾಡಿಕೊಡುತ್ತದೆ. ಆದರೆ ಸಲಿಂಗಿಗಳು ಹಾಗೂ ಏಕಾಂಗಿಯಾಗಿ ಬಾಳುವವರಿಗೆ ಬಾಡಿಗೆ ತಾಯಂದಿರ ಸೇವೆ ನಿಷಿದ್ಧವಾಗಲಿದೆ. ಇದಲ್ಲದೆ, ಹಣ ಕೊಟ್ಟು ಸುಲಭವಾಗಿ ಮಕ್ಕಳನ್ನು ಪಡೆಯುತ್ತಿದ್ದ ಧನಿಕರು, ಸೆಲೆಬ್ರಿಟಿಗಳಿಗೆ ಕೂಡ ಇನ್ನು ಕಷ್ಟವಾಗಲಿದೆ.

ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಚರ್ಚೆ ಆರಂಭಿಸಿ, ಸಮಾಜ, ರಾಜಕೀಯ ಪಕ್ಷಗಳು, ಸುಪ್ರೀಂಕೋರ್ಟ್‌ ಹಾಗೂ ಕಾನೂನು ಆಯೋಗಗಳು ವಾಣಿಜ್ಯ ಉದ್ದೇಶದ ಬಾಡಿಗೆ ತಾಯಂದಿರ ಸೇವೆ ಕುರಿತು ಪ್ರಸ್ತಾಪ ಮಾಡಿವೆ. ಆ ಕಳವಳಗಳಿಗೆ ವಿಧೇಯಕದಲ್ಲಿ ಪರಿಹಾರವಿದೆ ಎಂದು ಹೇಳಿದರು.

ಪ್ರತಿಪಕ್ಷಗಳ ಸದಸ್ಯರೂ ಮಸೂದೆಯನ್ನು ಬೆಂಬಲಿಸಿದ್ದು ವಿಶೇಷವಾಗಿತ್ತು. ಆದರೆ ಆಧುನಿಕ ಕಾಲಕ್ಕೆ ಈ ವಿಧೇಯಕ ತಕ್ಕುದಾಗಿಲ್ಲ ಎಂಬ ಅಭಿಪ್ರಾಯಗಳೂ ಕೇಳಿಬಂದವು. ಕೆಲವು ಸೆಲೆಬ್ರಿಟಿಗಳು ತಮ್ಮ ‘ಮೈಮಾಟ ಹಾಳಾಗುತ್ತದೆ’ ಎಂಬ ಕಾರಣ ನೀಡಿ ಬಾಡಿಗೆ ಯಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

2017ರ ಆ.24ರಂದು ಈ ವಿಧೇಯಕವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿತ್ತು. 2016ರ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿ, ಸ್ಥಾಯಿ ಸಮಿತಿಗೆ ನೀಡಲಾಗಿತ್ತು.

ಮಸೂದೆಯಲ್ಲಿ ಏನಿದೆ?:

1. ವಿವಾಹವಾಗಿ 5 ವರ್ಷಗಳು ಕಳೆದರೂ ಮಕ್ಕಳಾಗದಿದ್ದರೆ, ಆ ದಂಪತಿ ತಮ್ಮ ಹತ್ತಿರದ ಬಂಧುವನ್ನು ಬಾಡಿಗೆ ತಾಯಿಯಾಗಿ ಬಳಸಿಕೊಂಡು ಮಗು ಪಡೆಯಬಹುದು.

2. ಏಕಾಂಗಿಯಾಗಿ ಬಾಳುತ್ತಿರುವವರು, ಲಿವ್‌-ಇನ್‌ ಜೋಡಿಗಳು ಅಥವಾ ಸಲಿಂಗಿಗಳಿಗೆ ಬಾಡಿಗೆ ತಾಯ್ತನದ ಅವಕಾಶವಿಲ್ಲ.

3. ಬಾಡಿಗೆ ತಾಯಂದಿರಿಂದ ಹುಟ್ಟಿದ ಮಗು, ಅದನ್ನು ಪಡೆದುಕೊಂಡವರ ಕಾನೂನುಬದ್ಧ ಸಂತಾನವಾಗಿರುತ್ತದೆ.

4. ಬಂಧುಗಳು ಇಲ್ಲದಿದ್ದರೆ ಅಥವಾ ಬಾಡಿಗೆ ತಾಯಿಯಾಗಲು ಬಂಧುಗಳು ಒಪ್ಪದಿದ್ದರೆ, ಮಕ್ಕಳನ್ನು ದತ್ತು ಪಡೆಯುವುದೊಂದೇ ಮಾರ್ಗ.

5. ಈಗಾಗಲೇ ಮಗು ಹೊಂದಿರುವ, ವಿವಾಹವಾಗಿರುವ ಹಾಗೂ ರಕ್ತ ಸಂಬಂಧಿಯಾಗಿರುವವರು ಮಾತ್ರ ಬಾಡಿಗೆ ತಾಯಿಯಾಗಬಹುದು. ಅದೂ ಜೀವನದಲ್ಲಿ ಒಮ್ಮೆ ಮಾತ್ರ.

6. ಈಗಾಗಲೇ ಮಕ್ಕಳ ಹೊಂದಿದವರಿಗೆ ಬಾಡಿಗೆ ತಾಯ್ತನ ಮೂಲಕ ಮಕ್ಕಳ ಪಡೆಯಲಾಗದು

7. ಬಾಡಿಗೆ ತಾಯಿಯಾದ ರಕ್ತ ಸಂಬಂಧಿಗೆ ಚಿಕಿತ್ಸಾ ವೆಚ್ಚ ಮಾತ್ರ ನೀಡಬೇಕು. ಅದು ಬಿಟ್ಟು ಇತರೆ ಪರಿಹಾರ ನಿಷಿದ್ಧ.

8. ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ.

9. ಬಾಡಿಗೆ ಯಾಯ್ತನ ಮೂಲಕ ಮಗು ಪಡೆಯುವವರು ಹಾಗೂ ಮಗು ಹೆತ್ತು ಕೊಡುವವರು ಈ ಪ್ರಕ್ರಿಯೆಯ ಮುನ್ನ ಸಂಬಂಧಿತ ಪ್ರಾಧಿಕಾರದ ಅನುಮತಿ ಪತ್ರ ಪಡೆಯಬೇಕು

10. ಭಾರತೀಯ ಪೌರರು ಮಾತ್ರ ಈ ಕಾನೂನಿನಡಿ ಮಕ್ಕಳ ಪಡೆಯಲು ಸಾಧ್ಯ

11. ವಿದೇಶೀ ವ್ಯಕ್ತಿಗಳು ಭಾರತದಲ್ಲಿ ಬಂದು ಬಾಡಿಗೆ ತಾಯ್ತನದ ಮೂಲಕ ಮಕ್ಕಳ ಪಡೆಯಲಾಗದು

ಸೆಲೆಬ್ರಿಟಿಗಳಿಗೆ ಇನ್ನು ಕಷ್ಟಕಷ್ಟ

ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಅಮೀರ್‌ ಖಾನ್‌, ಸೊಹೇಲ್‌ ಖಾನ್‌ರಂತಹ ನಟರು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆದ ಖ್ಯಾತನಾಮರು. ಇವರಲ್ಲಿ ಕೆಲವರು ಮಕ್ಕಳನ್ನು ಹೊಂದಿದ್ದರೂ, ಬಾಡಿಗೆ ತಾಯ್ತನದ ಮೂಲಕ ಮತ್ತಷ್ಟುಮಕ್ಕಳ ಪಡೆದಿದ್ದರು. ಹಣ ಕೊಟ್ಟು ಸುಲಭವಾಗಿ ಮಕ್ಕಳನ್ನು ಪಡೆಯುತ್ತಿದ್ದ ಇಂಥವರಿಗೆ ಇನ್ನು ಕಷ್ಟವಾಗಲಿದೆ. ತೀರಾ ಹತ್ತಿರದ ಸಂಬಂಧಿಕರು ಸಿಕ್ಕರೆ ಮಾತ್ರವೇ ಸೇವೆ ಪಡೆಯಬಹುದು. ಇನ್ನು ನಟ ತುಷಾರ್‌ ಕಪೂರ್‌ ವಿವಾಹವಾಗದೇ ಇದ್ದರೂ ಬಾಡಿಗೆ ತಾಯಿ ಮೂಲಕ ಮಗು ಪಡೆದು ತಂದೆಯಾಗಿದ್ದಾರೆ. ಇನ್ನು ಅಂಥದ್ದಕ್ಕೆಲ್ಲಾ ಅವಕಾಶವಿರುವುದಿಲ್ಲ.

Follow Us:
Download App:
  • android
  • ios