ಭದ್ರತೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹೆಜ್ಜೆಯಿಡಲಿದ್ದೇವೆ. ಭದ್ರತಾಲೋಪದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.- ಮನೋಹರ್ ಪರಿಕ್ಕರ್

ನವದೆಹಲಿ(ಡಿ.02): ‘‘ಪಿಒಕೆಯಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಯು ಶತ್ರುರಾಷ್ಟ್ರದ ಮನಸ್ಸಿನಲ್ಲಿ ಅಸ್ಥಿರತೆಯ ಭಾವ ಮೂಡಿಸಿದ್ದರೆ, ಭಾರತದಲ್ಲಿ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ,’’ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನುಡಿದಿದ್ದಾರೆ.

ಸೇನಾನೆಲೆಯ ಭದ್ರತೆ ಕುರಿತು ಮಾತನಾಡಿದ ಅವರು, ‘‘ಭದ್ರತೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹೆಜ್ಜೆಯಿಡಲಿದ್ದೇವೆ. ಭದ್ರತಾಲೋಪದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸೇನಾನೆಲೆಗಳಿಗೆ ಭದ್ರತೆ ಒದಗಿಸಲು ಸ್ಮಾರ್ಟ್ ಸೊಲ್ಯೂಷನ್‌ಗಳನ್ನು ಅಭಿವೃದ್ಧಿಪಡಿಸುವಂತೆ ಡಿಆರ್‌ಡಿಒಗೆ ಕೇಳಿಕೊಂಡಿದ್ದೇವೆ,’’ ಎಂದಿದ್ದಾರೆ.

ಬಿಜೆಪಿ ಜತೆ ಮೈತ್ರಿ ಇಲ್ಲ: ಇದೇ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಸಿಎಂ ಅಖಿಲೇಶ್ ಅವರೂ ಮಾತನಾಡಿದ್ದು, ಬಿಜೆಪಿ ಜತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್ ಬಯಸಿದರೆ, ಆ ಪಕ್ಷದ ಜೊತೆ ರಾಷ್ಟ್ರೀಯ ಮೈತ್ರಿಗೆ ಸಿದ್ಧ. ಉತ್ತರಪ್ರದೇಶದಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಡರೆ 300ರಿಂದ 403 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.

ನೋಟು ಅಮಾನ್ಯ ಕುರಿತು ಮಾತನಾಡಿದ ಅವರು, ‘‘ಮಮತಾ ಅವರು ಎತ್ತುತ್ತಿರುವ ಪ್ರಶ್ನೆಗಳು ನ್ಯಾಯಸಮ್ಮತವಾದುದು. ಜನಸಾಮಾನ್ಯರ ಕಷ್ಟದಲ್ಲಿದ್ದರೆ, ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಬ್ಯಾಂಕುಗಳು ಮನೆಬಾಗಿಲಿಗೇ ಬಂದು ಸೇವೆ ಕಲ್ಪಿಸುತ್ತಿವೆ’’ ಎಂದಿದ್ದಾರೆ.