ನವದೆಹಲಿ(ಅ.4): ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಇತ್ತೀಚೆಗೆ ಭಾರತ ನಡೆಸಿದ ಸರ್ಜಿಕಲ್ ದಾಳಿ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕೆಲ ರಾಜಕೀಯ ಪಕ್ಷಗಳ ನಾಯಕರು ದಾಳಿ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ವಾದಗಳಿಗೆ ತಿರುಗೇಟು ನೀಡುವಲ್ಲಿ ಬಿಜೆಪಿಯೂ ಮಗ್ನವಾಗಿದೆ.
‘‘ದಾಳಿಯೇ ನಕಲಿ, ರಾಷ್ಟ್ರೀಯ ಹಿತಾಸಕ್ತಿಯಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ,’’ ಎಂದು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಉಮಾಭಾರತಿ, ‘‘ದಾಳಿ ಕುರಿತು ಅನುಮಾನ ಹೊಂದಿರುವವರು ಪಾಕಿಸ್ತಾನದ ನಾಗರಿಕತ್ವ ಪಡೆಯಲಿ,’’ ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ದಾಳಿ ಬಗ್ಗೆ ಮಾತನಾಡಿರು ಮಾಜಿ ಸಚಿವ ಚಿದಂಬರಂ, ‘‘ ಕಾಂಗ್ರೆಸ್ ಸರ್ಕಾರದ ಅವಯಲ್ಲೂ ಸರ್ಜಿಕಲ್ ದಾಳಿ ನಡೆದಿತ್ತು. ನಾವು ಅದನ್ನು ಬಹಿರಂಗಪಡಿಸಿರಲಿಲ್ಲ ಅಷ್ಟೇ,’’ ಎಂದಿದ್ದಾರೆ.
ಇನ್ನು ಸೋಮವಾರಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಕೇಜ್ರಿವಾಲ್, ‘‘ಸರ್ಜಿಕಲ್ ದಾಳಿ ನಡೆಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಸೆಲ್ಯೂಟ್ ಮಾಡುತ್ತೇನೆ. ಇದರ ಜತೆಗೆ, ಅವರು ದಾಳಿ ಕುರಿತು ಪಾಕಿಸ್ತಾನ ನಡೆಸುತ್ತಿರುವ ಪ್ರಚಾರವನ್ನು ಬಯಲು ಮಾಡಬೇಕು,’’ ಎಂದಿದ್ದರು. ಈ ಹೇಳಿಕೆಯನ್ನು ವಿರೋಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘‘ಕೇಜ್ರಿವಾಲ್ ಅವರು ಭಾರತೀಯ ಸೇನೆಯನ್ನು ನಂಬುತ್ತಾರೋ, ಇಲ್ಲವೋ ಎಂಬುದನ್ನು ಅವರೇ ಹೇಳಲಿ. ದಾಳಿಗೆ ಪುರಾವೆ ಕೇಳುವ ಮೂಲಕ ನಮ್ಮ ಸಶಸ ಪಡೆಗಳ ನಾಯಕತ್ವ, ಧೈರ್ಯ ಮತ್ತು ತ್ಯಾಗವನ್ನು ಕೇಜ್ರಿವಾಲ್ ತುಚ್ಛವಾಗಿ ಕಂಡಿದ್ದಾರೆ, ಕೇಜ್ರಿವಾಲ್ ಅವರೇ, ನೀವಿಂದು ಪಾಕಿಸ್ತಾನಿ ಪತ್ರಿಕೆಗಳ ಶೀರ್ಷಿಕೆಯಲ್ಲಿ ಮಿಂಚಿದ್ದೀರಿ. ನಿಮ್ಮ ಹೇಳಿಕೆಯು ನೆರೆರಾಷ್ಟ್ರಕ್ಕೆ ನಮ್ಮ ಸೇನೆ ಮೇಲೆ ಅನುಮಾನ ಪಡಲು ಅವಕಾಶ ಕೊಟ್ಟಿದೆ,’’ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಚಿದಂಬರಂ ಅವರೂ ಕೇಜ್ರಿವಾಲರಂತೆಯೇ ಮಾತನಾಡುತ್ತಿದ್ದಾರೆ ಎಂದೂ ಟೀಕಿಸಿದ್ದಾರೆ.
ಇದಕ್ಕೆ ಕೇಜ್ರಿವಾಲ್ ಅವರೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘‘ನಾನು ಹೇಳಿದ್ದೇನು? ನಾನು ಸರ್ಕಾರವನ್ನು ಶ್ಲಾಘಿಸಿದ್ದೆ. ಪಾಕ್‌ಗೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಕೇಳಿದ್ದೆ ಅಷ್ಟೆ. ಅಷ್ಟಕ್ಕೇ ಬಿಜೆಪಿಯೇಕೆ ತಡಬಡಾಯಿಸುತ್ತಿದೆ,’’ ಎಂದು ಪ್ರಶ್ನಿಸಿದ್ದಾರೆ.
ಮೊದಲಲ್ಲ ಎಂದ ಖರ್ಗೆ
ಹುಬ್ಬಳ್ಳಿ: ಭಾರತೀಯ ಸೇನೆ ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿರುವುದು ಇದೇ ಮೊದಲಲ್ಲ. ಹಿಂದೆಯೂ ನಡೆದಿತ್ತು. ಮುಂದೆಯೂ ನಡೆಯುತ್ತದೆ. ಬಿಜೆಪಿ ಪ್ರಚಾರ ಗಿಟ್ಟಿಸುತ್ತಿದೆ ಅಷ್ಟೆ. ಅದರೆ, ಸೈನಿಕರ ರಕ್ಷಣೆ ದೃಷ್ಟಿಯಿಂದ ಸರ್ಕಾರ ಒಳ್ಳೆ ಕೆಲಸ ಮಾಡಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇನ್ನಾದರೂ ಪಾಕ್ ಪಾಠ ಕಲಿಯಬೇಕು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸರ್ಜಿಕಲ್ ದಾಳಿ ನಕಲಿ: ಇದೇ ವೇಳೆ, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಅವರೂ ಸರ್ಜಿಕಲ್ ದಾಳಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದು, ‘‘ಇದೊಂದು ನಕಲಿ ದಾಳಿ. ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯಲ್ಲೂ ರಾಜಕೀಯ ಮಾಡುತ್ತಿದೆ,’’ ಎಂದು ಆರೋಪಿಸಿದ್ದಾರೆ. ‘‘ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಯಬೇಕೆಂದು ಪ್ರತಿಯೊಬ್ಬ ಭಾರತೀಯನೂ ಬಯಸುತ್ತಾನೆ. ಆದರೆ, ಬಿಜೆಪಿ ಮಾಡುತ್ತಿರುವಂತೆ ನಕಲಿ ದಾಳಿಯನ್ನಲ್ಲ. ಬಿಜೆಪಿ ಮಾಡುತ್ತಿರುವ ಪ್ರಚಾರ ನೋಡಿದರೆ, ಅಂಥ ದಾಳಿ ನಡೆದಿರುವುದರ ಬಗ್ಗೆಯೇ ಅನುಮಾನ ಮೂಡುತ್ತಿದೆ,’’ ಎಂದಿದ್ದಾರೆ ನಿರುಪಮ್.
