ನವದೆಹಲಿ(ಅ.05): ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಕುರಿತ ವಿಡಿಯೋ ತುಣುಕುಗಳನ್ನು ಭಾರತೀಯ ಸೇನೆ ಸರ್ಕಾರಕ್ಕೆ ಒಪ್ಪಿಸಿದೆ. ಈ ಹಿಂದೆ ಗೃಹ ಸಚಿವ ರಾಜ್’ನಾಥ್ ಸಿಂಗ್ ವಿಡಿಯೋ ತುಣುಕು ಬಿಡುಗಡೆ ಮಾಡುವ ಕುರಿತಂತೆ ಕಾದು ನೋಡಿ ಎಂದು ಹೇಳಿದ ಮಾತಿಗೆ ಪುಷ್ಟಿ ಬಂದಂತಾಗಿದೆ.
ಸೆಪ್ಟೆಂಬರ್ 28ರ ರಾತ್ರಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತು. ದಾಳಿಯ ವಿಡಿಯೋ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕುರಿತಂತೆ ಗೃಹ ಸಚಿವಾಲಯದ ರಾಜ್ಯಖಾತೆ ಸಚಿವ ಹಂಸರಾಜ್ ಆಹಿರ್ ಸ್ಪಷ್ಟಪಡಿಸಿದ್ದಾರೆ.
ಮೊದಲೆಲ್ಲಾ ಬರವಣಿಗೆಯಲ್ಲೇ ದಾಖಲೆಯನ್ನು ಒದಗಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಈಗ ವಿಡಿಯೋ ಕ್ಲಿಪ್ಸ್’ಗಳನ್ನು ದಾಖಲೆ ರೂಪದಲ್ಲಿ ವರದಿ ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಲು ಅನುಮತಿ ನೀಡಿದರೆ, ಪಾಕಿಸ್ಥಾನದ ಆರೋಪಗಳಿಗೆ ತಕ್ಕ ಉತ್ತರ ಸಿಗಲಿದೆ ಎಂದು ಆಹಿರ್ ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆದಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿತ್ತು.
ಸರ್ಜಿಕಲ್ ದಾಳಿಯ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಿದರೆ ರಾಜಕೀಯ ದೊಂಬರಾಟಕ್ಕೆ ಬ್ರೇಕ್ ಬೀಳಲಿದೆ ಎಂದಿದ್ದಾರೆ. ಆದರೆ ಹಿರಿಯ ರಕ್ಷಣಾ ತಜ್ಞರೂ ಹಾಗೂ ಸೇನೆ ವಿಡಿಯೋ ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ತಾಕೀತು ಮಾಡಿದೆ ಎಂದು ಉನ್ನತ ತಿಳಿಸಿವೆ.
ಈ ಹಿಂದೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಸಾಕ್ಷಿ ಒದಗಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
