ಬೆಂಗಳೂರು: ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಕೇರಳದ ಕೊಲೆ ಮತ್ತು ಇತರ ಅಪರಾಧಗಳ ಸಂಸ್ಕೃತಿಯನ್ನು ಕರ್ನಾಟಕಕ್ಕೆ ರಫ್ತು ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ಮಾಜಿ ಕಾನೂನು ಸಚಿವ ಎಸ್‌.ಸುರೇಶ್‌ಕುಮಾರ್‌ ಗಂಭೀರವಾಗಿ ಆಪಾದಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿ​ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಂಘ​ಟಿಸಲು ತಮ್ಮ ಪಕ್ಷದ ಕಾರ್ಯಕರ್ತರಿಗೆ ವೇಣುಗೋಪಾಲ್‌ ಅವರು ಕೇರಳ ಮಾದರಿ ಸಲಹೆ ನೀಡಿದ್ದಾರೆ. ಕೇರಳದಲ್ಲಿ ಹತ್ಯೆ, ಹಿಂಸೆ, ಅತ್ಯಾಚಾರಗಳು ಹೇಗೆಲ್ಲಾ ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ವೇಣು ತಮ್ಮ ರಾಜ್ಯದ ಕೊಲೆ ಸಂಸ್ಕೃತಿಯನ್ನು ರಾಜ್ಯ ಸರ್ಕಾರ ಆಮದು ಮಾಡಿಕೊಳ್ಳುವಂತೆ ಮಾಡಬಾರದು ಎಂಬ ಮನವಿ ಮಾಡುತ್ತೇನೆ ಎಂದು ಹೇಳಿದರು.

ವೇಣು ರಾಜ್ಯದಲ್ಲಿ ಚುನಾವಣೆ ರಣೋತ್ಸಾಹ ತೋರಿಸುತ್ತಿದ್ದಾರೆ. ಆದರೆ ಆ ಉತ್ಸಾಹ ಗಡಿ ದಾಟುವಂತಾಗಿದೆ. ವಿದ್ಯಾರ್ಥಿ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಪದಾಧಿಕಾರಗಳ ಸಭೆಯಲ್ಲಿ ಎಬಿವಿಪಿ ಮತ್ತು ಆರ್‌ಎಸ್‌ಎಸ್‌ ಪ್ರೇರಿತ ಕಾಲೇಜುಗಳ ಪಟ್ಟಿಕೇಳಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಕಾಲೇಜುಗಳ ಪ್ರಾಂಶು​ಪಾಲರ ಮಾಹಿತಿಯನ್ನೂ ಸಂಗ್ರಹಿಸಲು ಸೂಚಿಸಿದ್ದಾರೆ. ಇದಕ್ಕೆ ಕೇರಳವನ್ನು ಮಾದರಿಯ​ನ್ನಾಗಿ ಮಾಡುವಂತೆ​ಯೂ ಹೇಳಿದ್ದಾರೆ. ಈ ಕ್ರಮ ಸರಿಯಲ್ಲ. ಇದನ್ನು ನಾನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದರು.