ಅನರ್ಹರಿಂದ ಪಕ್ಷಗಳ ಟಿಕೆಟ್‌ ಹಂಚಿಕೆಗೆ ಸುಪ್ರೀಂ ಅಚ್ಚರಿ!

Supreme Court Slams Union Govt
Highlights

ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಚುನಾವಣಾ ರಾಜಕೀಯದಿಂದ ಅನರ್ಹಗೊಂಡ ಅಪರಾಧಿಗಳು, ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ.

ನವದೆಹಲಿ: ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಚುನಾವಣಾ ರಾಜಕೀಯದಿಂದ ಅನರ್ಹಗೊಂಡ ಅಪರಾಧಿಗಳು, ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ.

ಈ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ‘ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥನೆಂದು ದೃಢೀಕೃತಗೊಂಡ ವ್ಯಕ್ತಿ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಂಡಿರುತ್ತಾನೆ.

ಅಂಥ ವ್ಯಕ್ತಿ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುತ್ತಾನೆ? ಇಂಥ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪಾವಿತ್ರ್ಯತೆ ಕಾಪಾಡಲು ಹೇಗೆ ಸಾಧ್ಯ?,’ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿತು. ಬಳಿಕ ಈ ಅರ್ಜಿಯ ಅಂತಿಮ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ.

ಆಪಾದನೆ ಹೊತ್ತ ವ್ಯಕ್ತಿಗಳು ರಾಜಕೀಯ ಪಕ್ಷ ಸ್ಥಾಪನೆ ಮತ್ತು ಅಂಥವರು ರಾಜಕೀಯ ಪಕ್ಷದ ಯಾವುದೇ ಹುದ್ದೆ ಹೊಂದುವುದಕ್ಕೆ ತಡೆ ನೀಡಬೇಕು ಎಂಬುದಾಗಿ ಬಿಜೆಪಿ ಮುಖಂಡ ಅಶ್ವಿನಿ ಕೆ. ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಉಪಾಧ್ಯಾಯ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್‌ ಸಿಂಗ್‌, ‘ದೇಶದಲ್ಲಿರುವ ಶೇ.40ರಷ್ಟುಜನಪ್ರತಿನಿಧಿಗಳು ಅಪರಾಧಿ ಹಿನ್ನೆಲೆಯವರಾಗಿದ್ದಾರೆ ಅಥವಾ ಕೆಲ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ,’ ಎಂದು ಆರೋಪಿಸಿದರು.

loader