ನವದೆಹಲಿ : ಕೆರೆ ಮತ್ತು ಕಾಲುವೆಗಳ ಬಫರ್ ಜೋನ್ ನಿಗದಿಪಡಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಮಂತ್ರಿಟೆಕ್ ಜೋನ್ ಸೇರಿ ದಂತೆ ಹತ್ತಾರು ಬಿಲ್ಡರ್‌ಗಳು ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಕರ್ನಾಟಕ ಸರ್ಕಾರವನ್ನು ತೀವ್ರ ತರಾಟೆಗೆ  ತೆಗೆದುಕೊಂಡಿದೆ.

2016 ರ ಮೇ ತಿಂಗಳಲ್ಲಿ ಬೆಂಗಳೂರಿನ ಕೆರೆಗಳಿಂದ 75 ಮೀಟರ್, ರಾಜಕಾಲುವೆಗಳಿಂದ 50 ಮೀಟರ್, ಸೆಕೆಂಡರಿ ಕಾಲುವೆಗಳಿಂದ 35 ಮೀಟರ್ ಮತ್ತು ತೃತೀಯ ಹಂತದ ಕಾಲುವೆಗಳಿಂದ 25 ಮೀಟರ್ ಬಫರ್  ವಲಯ ನಿಗದಿ ಪಡಿಸಿ ಎನ್‌ಜಿಟಿ ಆದೇಶಿಸಿತ್ತು. ಹಾಗೆಯೇ ಬಫರ್ ವಲಯ ಮಿತಿಯನ್ನು ಉಲ್ಲಂಘಿಸಿದ್ದಾರೆ ಎಂದು ಮಂತ್ರಿ ಟೆಕ್ ಝೋನ್ ಮತ್ತು ಕೋರ್ ಮೈಂಡ್ ಸಂಸ್ಥೆಗಳಿಗೆ ಎನ್‌ಜಿಟಿ ದೊಡ್ಡ ಮೊತ್ತದ ದಂಡ ವಿಧಿಸಿತ್ತು. 

ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಈ ಎರಡು ಸಂಸ್ಥೆಗಳು ಪ್ರಶ್ನಿಸಿದ್ದವು. ಮಂಗಳವಾರ ಪ್ರಕರಣದ ವಿಚಾರಣೆಯು ನ್ಯಾ| ಎ.ಕೆ.ಸಿಕ್ರಿ, ನ್ಯಾ| ಅಬ್ದುಲ್ ನಜೀರ್ ಮತ್ತು ನ್ಯಾ| ಎಂ.ಆರ್.ಷಾ ಅವರ ತ್ರಿಸದಸ್ಯ ನ್ಯಾಯಪೀಠದ ಮುಂದೆ ಬಂದಿತ್ತು. ರಾಜ್ಯದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ತೃತೀಯ ಹಂತದ ಕಾಲುವೆ ಬೆಂಗಳೂರಿನ ಪ್ರತಿಯೊಬ್ಬರ ಮನೆಯ ಮುಂದೆ ಇದೆ. ಒಂದು ವೇಳೆ ಎನ್‌ಜಿಟಿ ಆದೇಶದಂತೆ ತೃತೀಯ ಹಂತದ ಕಾಲುವೆಗಳಿಂದ 25 ಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡಗಳನ್ನು ಕೆಡವಲು ಹೊರಟರೆ ಬೆಂಗಳೂರಿನ ಶೇ.95 ಭಾಗ ಧ್ವಂಸವಾಗಲಿದೆ ಎಂದು ವಾದಿಸಿದರು.

ಹಾಗೆಯೇ ಬಫರ್ ವಲಯ ನಿಗದಿ ವಿಚಾರ ನ್ಯಾಯಾಧೀಕರಣದ ಮುಂದೆ ಇರಲೇ ಇಲ್ಲ ಎಂದು ತಿಳಿಸಿದರು. ಬೆಳ್ಳಂದೂರಿನ ಮಂತ್ರಿಟೆಕ್ ಝೋನ್ ಇರುವ ಪ್ರದೇಶವು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಿಂದ ಖರೀದಿಸಲಾಗಿದೆ, ಪರಿಷ್ಕೃತ ಮಾಸ್ಟರ್ ಪ್ಲ್ಯಾನ್‌ನ ಭಾಗವಾಗಿದೆ ಎಂದು ವಿವರಿಸಿದರು.

ಮಧ್ಯ ಪ್ರವೇಶಿಸಿದ ನ್ಯಾ| ಅಬ್ದುಲ್ ನಜೀರ್, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಸತಿ ಯೋಜನೆಗೆ ಮಾತ್ರ ಅವಕಾಶ. ಈ ಜಮೀನು ಕೆಐಎಡಿಬಿಗೆ ಹೇಗೆ ಹೋಯಿತು? ಅಲ್ಲಿಂದ ಮತ್ತೆ ವಸತಿ ಯೋಜನೆಗೆ ಹೇಗೆ ಬಂತು ಎಂದು ತೀವ್ರವಾಗಿ ಪ್ರಶ್ನಿಸಿದರು. ಈ ವೇಳೆ ಎಜಿ ಹೊಳ್ಳ ಉತ್ತರವಿಲ್ಲದೆ ತಬ್ಬಿಬ್ಬಾದರು. 

ಕೊಳಚೆಯನ್ನೇ ನಿಯಂತ್ರಿಸಲು ಆಗಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಈ ಅಂಶಗಳೆಲ್ಲ ಈ ಪ್ರಕರಣದಲ್ಲಿ ಅಡಕವಾಗಿಲ್ಲ ಎಂದರು. ನ್ಯಾ| ಅಬ್ದುಲ್ ನಜೀರ್, ಕೆರೆ ಸರಿಪಡಿಸಲು ಹಣ ನೀಡುವಂತೆ ಎನ್‌ಜಿಟಿ ಸೂಚನೆಯನ್ನೂ ನೀವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ನಿಮಗೆ ಮನೆಗಳಿಂದ ಬರುವ ಕೊಳಚೆಯನ್ನೇ ನಿಯಂತ್ರಿಸಲು ಸಾಧ್ಯವಾಗಿಲ್ಲ. ನಮ್ಮ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿಲ್ಲ ಎನ್ನುತ್ತಿದ್ದಂತೆ ಹೊಳ್ಳ ಅವರು, ನಮ್ಮ ಬಳಿ ಉತ್ತರವಿಲ್ಲ. ಬೇರೆ ಯಾರಾದರೂ ಉತ್ತರ ಕೊಡುತ್ತಾರೆ. ವಿಶ್ವದಲ್ಲಿ ಎಲ್ಲೂ ಕೂಡ ಇಷ್ಟೊಂದು ಬಫರ್ ಮಿತಿ ಇಲ್ಲ ಎಂದರು. 

ವಿಶ್ವ ಅದರ ಕಾಳಜಿಯನ್ನು ಅದು ತೆಗೆದುಕೊಳ್ಳುತ್ತದೆ. ನೀವು ಬೆಂಗಳೂರಿನ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಎಂದು ನ್ಯಾ| ಅಬ್ದುಲ್ ನಜೀರ್ ಮಾರುತ್ತರ ನೀಡಿದರು. ಬಳಿಕ ಬಿಲ್ಡರ್‌ಗಳ ಪರ ಹಿರಿಯ ವಕೀಲ ಮುಕುಲ್ ರಹ್ತೋಗಿ, ‘ನಮಗೆ ಭೂಮಿ ನೀಡಿ, ಮನೆ ನಿರ್ಮಾಣಕ್ಕೆ ಅನುಮತಿ ನೀಡಿ, ಪರಿಸರ ಅನುಮತಿ ಸಿಕ್ಕಿಯೂ ಆಗಿದೆ. ಆದರೆ ಈಗ ಮನೆ ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಾದಿಸಿದರು. 

ಫಾರ್ವರ್ಡ್ ಫೌಂಡೇಶನ್ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಈ ಪ್ರದೇಶದಲ್ಲಿ ವಸತಿ ಸಂಕೀರ್ಣಗಳಿಗೆ ಮಾತ್ರ ಅವಕಾಶ ನೀಡಬೇಕಿತ್ತು. ಆದರೆ 67 ಎಕರೆ ಪ್ರದೇಶದಲ್ಲಿ ಸಾವಿರಾರು ಅಪಾರ್ಟ್‌ಮೆಂಟ್, ವಾಣಿಜ್ಯ ಮಳಿಗೆ, ಮಾಲ್‌ಗಳನ್ನು ಕಟ್ಟಲು ಅವಕಾಶ ನೀಡಲಾಗಿದೆ ಎಂದು ಎಂದು ವಾದಿಸಿದರು.


ವರದಿ :  ರಾಕೇಶ್ ಎನ್.ಎಸ್.