ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರದ ಬದಲಿಗೆ ಮತಪತ್ರ ಬಳಕೆ ಮಾಡುವ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಮತಪತ್ರ ಬಳಸಲು ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. 

ಈ ಬಗ್ಗೆ ‘ನ್ಯಾಯ ಭೂಮಿ’ ಎಂಬ ಎನ್‌ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ತಳ್ಳಿ ಹಾಕಿದರು. 

ಎಲ್ಲ ವ್ಯವಸ್ಥೆ ಹಾಗೂ ಮೆಷಿನ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಎಲ್ಲೆಡೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್‌ ಪತ್ರಿಕೆ ಬಳಸಬೇಕು ಎಂದು ಕೋರಿಕೊಂಡಿತ್ತು. ಆದರೆ, ಅನುಮಾನ ಎಂಬುದು ಎಲ್ಲೆಡೆಯೂ ಇರುತ್ತದೆ ಎಂದು ಹೇಳಿ, ಕೋರ್ಟ್‌ ಅರ್ಜಿ ವಜಾಗೊಳಿಸಿತು.