ನವದೆಹಲಿ/ಚಂಡೀಗಡ(ಸೆ.10): ದೆಹಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಅವರೇ ಮುಖ್ಯಸ್ಥರು ಎಂದು ಆ.೪ರಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದರಿಂದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದೇ ವೇಳೆ ಆಪ್ ಸಲ್ಲಿಸಿದ್ದ ಏಳು ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಆರು ವಾರಗಳ ಒಳಗಾಗಿ ಉತ್ತರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

‘‘ಪ್ರತಿ ದಿನವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಆದೇಶ ನೀಡಬೇಕಾಗಿದೆ. ಹೀಗಾಗಿ ನ.೧೫ರಂದು ಈ ಬಗ್ಗೆ ಅಂತಿಮ ವಿಚಾರಣೆ ನಡೆಸುತ್ತೇವೆ,’’ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ತಿಳಿಸಿತು. ಇದೇ ವೇಳೆ ಆಪ್ ಸಲ್ಲಿಸಿರುವ ಅರ್ಜಿಗಳನ್ನು ವಜಾ ಮಾಡಬೇಕೆಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮಂಡಿಸಿದ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ.

ಮುಂದುವರಿದ ಪ್ರಚಾರ: ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬ್‌ನಲ್ಲಿ ಪ್ರಚಾರ ಮುಂದುವರಿಸಿದ್ದಾರೆ. ಪಂಜಾಬ್‌ನಲ್ಲಿ ಆಪ್‌ಗೆ ಅಧಿಕಾರ ನೀಡಿದರೆ ಪವಿತ್ರ ನಗರ ಆನಂದಪುರ ಸಾಹಿಬ್ ನಗರವನ್ನು ಪವಿತ್ರ ನಗರವನ್ನಾಗಿಸುವುದಾಗಿ ಕೇಜ್ರಿವಾಲ್ ವಾಗ್ದಾನ ಮಾಡಿದ್ದಾರೆ. ಇದೇ ವೇಳೆ ದೆಹಲಿ ಸಿಎಂಗೆ ಹಲವಾರು ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಆಪ್ ದೂರಿದೆ.