ಕರ್ನಾಟಕದ 1.4 ಲಕ್ಷ ಅರಣ್ಯವಾಸಿಗಳಿಗೆ ಕುತ್ತು | ಜುಲೈನೊಳಗೆ ತೆರವುಗೊಳಿಸಲು ಸುಪ್ರೀಂ ಆದೇಶ | ದೇಶಾದ್ಯಂತ 23 ಲಕ್ಷ ಮಂದಿಗೆ ಸಮಸ್ಯೆ ಸಾಧ್ಯತೆ
ನವದೆಹಲಿ (ಫೆ. 23): ಕರ್ನಾಟಕದ 1.42 ಲಕ್ಷ ಅರಣ್ಯವಾಸಿಗಳು ಮುಂಬರುವ ಜುಲೈನ ಒಳಗಾಗಿ ಅರಣ್ಯದಿಂದ ತೆರವುಗೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
2006ರ ಅರಣ್ಯ ಹಕ್ಕು ಕಾಯ್ದೆಯಡಿ ಮಾನ್ಯತೆ ಕಳೆದುಕೊಂಡಿರುವ ಅರಣ್ಯವಾಸಿಗಳನ್ನು 2019ರ ಜು.24ರೊಳಗೆ ತೆರವುಗೊಳಿಸಬೇಕು ಎಂದು ತ್ರಿಸದಸ್ಯ ಪೀಠ ಫೆ.13ರಂದು ಆದೇಶ ನೀಡಿದೆ. ತನ್ನ ಈ ಆದೇಶವನ್ನು ಜಾರಿಗೆ ತರದಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ.
ಅಲ್ಲದೆ ತಾವು ಅರಣ್ಯವಾಸಿಗಳು ಎಂಬುದನ್ನು ನಿರೂಪಿಸಲು ವಿಫಲವಾಗಿರುವವರನ್ನು ಯಾಕೆ ತೆರವುಗೊಳಿಸಿಲ್ಲ ಎಂದು ಜು.12ರೊಳಗೆ ಮುಖ್ಯ ಕಾರ್ಯದರ್ಶಿಗಳು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಒತ್ತುವರಿ ಸ್ಥಳಗಳ ಕುರಿತು ಉಪಗ್ರಹ ಸಮೀಕ್ಷೆ ನಡೆಸಬೇಕು, ತೆರವುಗೊಳಿಸಿದ ಚಿತ್ರಣವನ್ನೂ ಸಲ್ಲಿಕೆ ಮಾಡಬೇಕು ಎಂದು ಹೇಳಿದೆ.
23 ಲಕ್ಷ ಮಂದಿಗೆ ಸಮಸ್ಯೆ:
ಅರಣ್ಯದಿಂದ ತೆರವುಗೊಳ್ಳಬೇಕಾದವರಲ್ಲಿ ಪರಿಶಿಷ್ಟಪಂಗಡ ಹಾಗೂ ಇನ್ನಿತರೆ ಸಾಂಪ್ರದಾಯಿಕ ಅರಣ್ಯವಾಸಿಗಳು ಇದ್ದಾರೆ. ಇಂಥವರ ಸಂಖ್ಯೆ ಕರ್ನಾಟಕದಲ್ಲಿ 1.42 ಲಕ್ಷದಷ್ಟಿದೆ. ಒಟ್ಟಾರೆ ದೇಶದಲ್ಲಿ 23 ಲಕ್ಷ ಮಂದಿ ಅರಣ್ಯದಿಂದ ತೆರವುಗೊಳ್ಳಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
2006ರ ಪರಿಶಿಷ್ಟಪಂಗಡ ಹಾಗೂ ಇನ್ನಿತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಕಾಯ್ದೆಯಡಿ ಅರಣ್ಯವಾಸಿಗಳಿಗೆ ಮಾನ್ಯತೆ ಅಥವಾ ಮಾನ್ಯತೆ ನಿರಾಕರಣೆ ಮಾಡುವ ಪ್ರಕ್ರಿಯೆ ನಡೆಸಲಾಗಿದೆ. ಗ್ರಾಮಸಭೆ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆದಿದ್ದು, ರಾಜ್ಯ ಮಟ್ಟದಲ್ಲಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಲಾಗಿತ್ತು.
ತಲೆತಲಾಂತರದಿಂದ ಅರಣ್ಯದಲ್ಲಿ ನೆಲೆಸಿರುವ ಪರಿಶಿಷ್ಟಪಂಗಡ ಹಾಗೂ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಹಕ್ಕು ನೀಡುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಮಾನ್ಯತೆ ಪಡೆಯದವರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಇದು ಹೋರಾಟಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 23, 2019, 11:55 AM IST