ರಾಮಜನ್ಮಭೂಮಿ ವಿವಾದ: ಜ.4ಕ್ಕೆ ಸುಪ್ರೀಂನಲ್ಲಿ ವಿಚಾರಣೆಗೆ ದಿನ ನಿಗದಿ | ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಹಾಗೂ ನ್ಯಾ. ಎಸ್‌.ಕೆ ಕೌಲ್‌ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಸಲಿದ್ದಾರೆ 

ನವದೆಹಲಿ (ಡಿ. 25): ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ಕುರಿತು ಸಲ್ಲಿಕೆಯಾದ ಅರ್ಜಿಗಳನ್ನು ಜನವರಿ 4ರಂದು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ. 

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಹಾಗೂ ನ್ಯಾ. ಎಸ್‌.ಕೆ ಕೌಲ್‌ ಪೀಠದ ಮುಂದೆ ಅರ್ಜಿ ವಿಚಾರಣೆಗೆ ನಿಗದಿಯಾಗಿದೆ. ಆದರೆ ಈ ಪೀಠವೇ ಅರ್ಜಿಯ ವಿಚಾರಣೆ ನಡೆಸದು. ಬದಲಾಗಿ ಅದು ಅರ್ಜಿ ವಿಚಾರಣೆಗೆ ಪ್ರತ್ಯೇಕ ಸಂವಿಧಾನ ಪೀಠ ರಚಿಸಲಿದೆ ಎನ್ನಲಾಗಿದೆ.

2.77 ಎಕರೆ ವಿಸ್ತೀರ್ಣ ಇರುವ ಬಾಬ್ರಿ ಮಸೀದಿಯ ಪ್ರದೇಶವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖರಾ ಮತ್ತು ರಾಮ್‌ ಲಲ್ಲಾಗೆ ಸಮಾನವಾಗಿ ಹಂಚಿಕೆ ಮಾಡಬೇಕೆಂಬ ಅಲಹಾಬಾದ್‌ ಹೈಕೋರ್ಟ್‌ನ 2010ರ ತೀರ್ಪನ್ನು ಪ್ರಶ್ನಿಸಿ, 14 ಅರ್ಜಿಗಳು ಸಲ್ಲಿಕೆಯಾಗಿದೆ.