ಮುಂಬಡ್ತಿ ಮೀಸಲಾತಿ ತಿಂಗಳಲ್ಲಿ ಜಾರಿಗೊಳಿಸಿ : ಸುಪ್ರೀಂ

First Published 21, Mar 2018, 7:34 AM IST
Supreme Court gives Karnataka one month to submit Revised seniority
Highlights

ರಾಜ್ಯ ಸರ್ಕಾರಕ್ಕೆ ಚುನಾವಣೆ ಹೊಸ್ತಿಲಲ್ಲೇ ಮತ್ತೊಂದು ಸಂಕಷ್ಟಎದುರಾಗಿದೆ.

ನವದೆಹಲಿ : ರಾಜ್ಯ ಸರ್ಕಾರಕ್ಕೆ ಚುನಾವಣೆ ಹೊಸ್ತಿಲಲ್ಲೇ ಮತ್ತೊಂದು ಸಂಕಷ್ಟಎದುರಾಗಿದೆ. ಎಸ್ಸಿ,ಎಸ್ಟಿಉದ್ಯೋಗಿಗಳಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡಿರುವ ರಾಜ್ಯದ ಕ್ರಮ ರದ್ದು ಗೊಳಿಸಿರುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಒಂದು ತಿಂಗಳೊಳಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಲೇ ಬೇಕು. ಇಲ್ಲದೇ ಹೋದಲ್ಲಿ ಏ.25ರಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಯು.ಯು.ಲಲಿತ್‌ ಅವರ ನ್ಯಾಯಪೀಠದ ಮುಂದೆ ಮಂಗಳವಾರ ಬಂದ ಸಂದರ್ಭದಲ್ಲಿ ರಾಜ್ಯದ ಪರ ವಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ಜೇಷ್ಠತಾ ಪಟ್ಟಿಸಿದ್ಧವಾಗಿದೆ. ಆದರೆ ಈ ಪಟ್ಟಿಜಾರಿ ಸಂದರ್ಭದಲ್ಲಿ ಆಗುವ ಪರಿಣಾಮಗಳಾದ ಹಿಂಬಡ್ತಿ, ಮುಂಬಡ್ತಿ ಮುಂತಾದವುಗಳ ಪಟ್ಟಿರಚನೆಯಾಗಿಲ್ಲ. ಜತೆಗೆ, ಪ್ರಕರಣದಲ್ಲಿ ಅಡಕವಾಗಿರುವ ಸಂಗತಿಗಳ ಕುರಿತ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ವಿಚಾರಣೆ ಬಾಕಿಯಿದೆ. ಬಡ್ತಿಯಲ್ಲಿ ಮೀಸಲಾತಿ ವಿಧೇಯಕಕ್ಕೆ ವಿಧಾನ ಮಂಡಲ ಅನುಮೋದನೆ ನೀಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಾಯುತ್ತಿದ್ದೇವೆ. ಆದ್ದರಿಂದ ಜುಲೈ ತನಕ ಪ್ರಕರಣದ ಬಗ್ಗೆ ಮುಂದಿನ ವಿಚಾರಣೆ ಮಾಡಬೇಡಿ ಎಂದು ಕೋರಿದರು.

ಆದರೆ ರಾಜ್ಯದ ವಾದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾ ಲಲಿತ್‌, ರಾಜ್ಯಕ್ಕೆ ತನ್ನ ನಡೆ ಸಮರ್ಥಿಸಿಕೊಳ್ಳಲು ಆಗಿಲ್ಲ, ರಾಜ್ಯ ಸರ್ಕಾರ ತನ್ನ ಸಿಬ್ಬಂದಿಯಲ್ಲಿ ಪಕ್ಷಪಾತ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಆಗ ರಾಜ್ಯದ ವಕೀಲರು ನಾವು ಅರ್ಜಿಯಲ್ಲಿ 6 ತಿಂಗಳು ಸಮಯ ಕೇಳಿದ್ದೇವೆ. ಕನಿಷ್ಠ ಪಕ್ಷ 2 ತಿಂಗಳಾದರೂ ನೀಡಿ ಎಂದು ಕೋರಿದರು. ಎಸ್ಸಿ, ಎಸ್ಟಿಕಲ್ಯಾಣ ಸಮಿತಿ ಪರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ರಾಜ್ಯದ ವಾದವನ್ನು ಬೆಂಬಲಿಸಿದರು.

ಆದರೆ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಸಿಬ್ಬಂದಿ ಪರ ವಾದಿಸಿದ ರಾಜೀವ್‌ ಧವನ್‌, ನಾವು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಎಸ್ಸಿ, ಎಸ್ಟಿಸಂಘಟನೆಗಳ ಪರ ವಾದ ಮಂಡನೆಗೆ ಅವಕಾಶವೇ ಇಲ್ಲ. ಕೋರ್ಟ್‌ ಆದೇಶ ಡಿಸೆಂಬರ್‌ ಅಂತ್ಯದೊಳಗೆ ಜಾರಿಯಾಗಬೇಕಿತ್ತು. ಕೋರ್ಟ್‌ ಆದೇಶದ ಬಗ್ಗೆ ಕೆಪಿಟಿಸಿಎಲ… ಆಕ್ಷೇಪ ಎತ್ತಬೇಕಿತ್ತು, ಆದರೆ ಅವರು ಆದೇಶ ಜಾರಿಗೆ ಮುಂದಾಗಿದ್ದಾರೆ. ಸುಪ್ರೀಂನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಕೋರ್ಟ್‌ ಆದೇಶವನ್ನು ಪಾಲಿಸದ ಮುಖ್ಯ ಕಾರ್ಯದರ್ಶಿಗಳನ್ನು ನ್ಯಾಯಾಲಯಕ್ಕೆ ಕರೆಸಿಕೊಳ್ಳಬೇಕು ಎಂದು ವಾದಿಸಿದರು.

2017ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌, ರಾಜ್ಯಸರ್ಕಾರದ ‘ಬಡ್ತಿ ಮೀಸಲಾತಿ ಕಾಯ್ದೆ-2002’ ಅನ್ನು ರದ್ದುಪಡಿಸಿ ತೀರ್ಪು ನೀಡಿತ್ತು. 3 ತಿಂಗಳೊಳಗೆ ಹೊಸ ಜೇಷ್ಠತಾ ಪಟ್ಟಿರಚಿಸುವಂತೆ ಆದೇಶಿಸಿತ್ತು. ಆದರೆ ರಾಜ್ಯ ಈ ಆದೇಶ ಪಾಲನೆ ಮಾಡಿರಲಿಲ್ಲ. ನಂತರ ಸಮಯ ಕೇಳಿದ ಹಿನ್ನೆಲೆಯಲ್ಲಿ 2017ರ ಡಿಸೆಂಬರ್‌ ವರೆಗೆ ಸಮಯಾವಕಾಶ ಸಿಕ್ಕಿತ್ತು. ಬಳಿಕ 2018ರ ಜನವರಿಯಲ್ಲಿ ಆದೇಶ ಪಾಲನೆಗೆ 3 ತಿಂಗಳು ನೀಡುವಂತೆ ಕೋರಿತ್ತು. ಆದರೆ ಒಂದೂವರೆ ತಿಂಗಳ ಸಮಯವನ್ನು ಕೋರ್ಟ್‌ ನೀಡಿತ್ತು.

loader