ನವದೆಹಲಿ: ‘ಸ್ಯಾರಿಡಾನ್‌’ ತಲೆನೋವು ನಿವಾರಕ ಔಷಧದ ಮಾರಾಟದ ಮೇಲೆ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೆರವುಗೊಳಿಸಿದೆ. ಇದೇ ವೇಳೆ ಪಿರಿಟನ್‌ ಹಾಗೂ ಡಾರ್ಟ್‌ ಎಂಬ ಔಷಧ ಮಾರಾಟಕ್ಕೂ ನ್ಯಾಯಾಲಯ ಅನುವು ಮಾಡಿದೆ.

ಕಳೆದ ವಾರ ಸ್ಯಾರಿಡಾನ್‌ ಸೇರಿದಂತೆ 328 ಔಷಧಗಳ ಉತ್ಪಾದನೆ ಹಾಗೂ ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆದರೆ ಇದರ ವಿರುದ್ಧ ಕಂಪನಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು. 1988ಕ್ಕಿಂತ ಮುಂಚಿನ ಔಷಧಗಳ ಮಾರಾಟ ಹಾಗೂ ಉತ್ಪಾದನೆ ನಿಷೇಧವನ್ನು ಅವು ಪ್ರಶ್ನಿಸಿದ್ದವು.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿ ಈ ಮೂರು ಔಷಧಗಳ ಮಾರಾಟದ ಮೇಲಿನ ನಿಷೇಧ ತೆರವುಗೊಳಿಸಿತು.

ಈ ಔಷಧದಲ್ಲಿನ ಅತಿಯಾದ ಆ್ಯಂಟಿ ಬಯಾಟಿಕ್‌ ಅಂಶವು ಮಾನವನಿಗೆ ಹಾನಿಕರ ಎಂದು ಅಭಿಪ್ರಾಯಪಟ್ಟು ಸೆಪ್ಟೆಂಬರ್‌ 13ರಂದು 328 ಔಷಧಗಳ ಮಾರಾಟ ನಿಷೇಧಿಸಿತ್ತು.