ಮುಂದಿನ ತಿಂಗಳಿಂದ 8 ಲಕ್ಷ ರೈತರ ಖಾತೆಗೆ ನೇರ ಹಣ ವರ್ಗಾವಣೆ | ಹಣ ವಿಳಂಬಕ್ಕೆ ಬ್ರೇಕ್ ಫಲಾನುಭವಿಗಳಿಗೆ ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಮಾಡಿಸುವ ಕೆಲಸ ಮುಕ್ತಾಯ ಹಂತಕ್ಕೆ
ಸುವರ್ಣಸೌಧ: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಇನ್ನುಮುಂದೆ ನಾಲ್ಕೈದು ತಿಂಗಳವರೆಗೂ ತಡವಾಗುವ ಪ್ರಮೇಯ ಬರುವುದಿಲ್ಲ. ಪ್ರೋತ್ಸಾಹ ಧನ ಹಂಚಿಕೆ ವಿಳಂಬ ಮಾಡುವ ಸಹಕಾರ ಸಂಘಗಳಿಗೆ ಅವಕಾಶವೂ ಇರುವುದಿಲ್ಲ. ಏಕೆಂದರೆ, ರಾಜ್ಯ ಸರ್ಕಾರ ಇನ್ನುಮುಂದೆ ರೈತರ ಬ್ಯಾಂಕ್ ಖಾತೆಗಳಿಗೇ ನೇರವಾಗಿ ಪ್ರೋತ್ಸಾಹ ಧನ ಜಮಾ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಸಿದ್ಧತೆಯೂ ನಡೆದಿದ್ದು, ಡಿಸೆಂಬರ್ ವೇಳೆಗೆ ರಾಜ್ಯದ ಎಲ್ಲಾ 8 ಲಕ್ಷ ರೈತರಿಗೂ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್) ಮೂಲಕ ಹಣ ಪಾವತಿಯಾಗಲಿದೆ.
ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ಈಗಾಗಲೇ ಎಲ್ಲಾ ಫಲಾನುಭವಿಗಳಿಗೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದ್ದು, ಈ ಕೆಲಸ ಶೇ.85ರಷ್ಟು ಮುಗಿದಿದೆ. ಹಾಗೆಯೇ ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಮಾಡುವ ಪ್ರಯತ್ನವೂ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಈ ಮಧ್ಯೆ, ಇ- ಆಡಳಿತ ಇಲಾಖೆ ಜತೆಗೂಡಿ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದೆ. ಡಿಸೆಂಬರ್ ವೇಳೆ
ರೈತರಿಗೆ ಯಾವುದೇ ಬಾಕಿ ಇಲ್ಲದಂತೆ ಪ್ರತಿ ಲೀಟರ್‌ಗೆ 5 ರುಪಾಯಿ ಪ್ರೋತ್ಸಾಹ ಧನದಂತೆ ದಿನಕ್ಕೆ 3.75 ಕೋಟಿ ರು. ರೈತರ ಖಾತೆಗೆ ಹೋಗುವಂತೆ ಮಾಡಲಾಗುತ್ತಿದೆ.
ಈವರೆಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಹಣ ಪಾವತಿಯಾಗಿ ನಂತರ ರೈತರಿಗೆ ಸಿಗುತ್ತಿತ್ತು. ಆದರೆ ಇನ್ನುಮುಂದೆ ಪ್ರತಿ ತಿಂಗಳು ಎಷ್ಟು ಮಂದಿ ರೈತರಿಗೆ ಎಷ್ಟು ಹಣ ಪಾವತಿಸಬೇಕೆಂದು ಪಶು ಸಂಗೋಪನಾ ಇಲಾಖೆ ಹಣಕಾಸು ಇಲಾಖೆಗೆ ಬೇಡಿಕೆ ಸಲ್ಲಿಸುತ್ತದೆ. ಅದರಂತೆ ಹಣಕಾಸು ಇಲಾಖೆಯ ಖಜಾನೆ 2ನೇ ವಿಭಾಗ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುತ್ತದೆ. ಹೀಗಾಗಿ ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ರೈತರಿಗೆ ಹಣ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3 ತಿಂಗಳಿಂದ ಹಣ ಕೊಟ್ಟಿಲ್ಲ: ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ 2010ರಿಂದಲೇ ಲೀಟರ್‌ಗೆ 2 ರು.ನಂತೆ ಪ್ರೋತ್ಸಾಹ ಧನ ನೀಡುವುದನ್ನು ಆರಂಭಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2015ರಲ್ಲಿ ಪ್ರೋತ್ಸಾಹ ಧನವನ್ನು ಲೀಟರ್‌ಗೆ 2 ರು. ಹೆಚ್ಚಿಸಲಾಯಿತು. ಇತ್ತೀಚೆಗೆ ಮತ್ತೆ ಒಂದು ರು. ಹೆಚ್ಚು ಮಾಡಲಾಗಿದೆ. ಅದರೊಂದಿಗೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರು.ನಂತೆ ನಿತ್ಯ 3.75 ಕೋಟಿ ರು. ಪಾವತಿಸಲಾಗುತ್ತಿದೆ. ಆದರೆ ಇದು ರೈತರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ಬದಲಾಗಿ ರಾಜ್ಯದ 14 ಹಾಲು ಒಕ್ಕೂಟಗಳಲ್ಲೂ ಒಂದೊಂದು ಸಮಯಕ್ಕೆ ರೈತರಿಗೆ ಹಣ ಪಾವತಿಸಲಾಗುತ್ತಿದೆ.
ವಿಚಿತ್ರವೆಂದರೆ, ರೈತರಿಗೆ ನೀಡಬೇಕಿರುವ ಪ್ರೋತ್ಸಾಹ ಧನವನ್ನು ಸರ್ಕಾರ ಪಾವತಿಸಿದೆಯಾ ದರೂ ಒಕ್ಕೂಟಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು, ಇಚ್ಛಿಸಿದಾಗ ರೈತರಿಗೆ ನೀಡುತ್ತವೆ.
ಈಗಲೂ ರಾಜ್ಯದ ಅನೇಕ ಒಕ್ಕೂಟಗಳು ಕಳೆದ ಸೆಪ್ಟೆಂಬರ್‌ನಿಂದಲೂ ರೈತರಿಗೆ ಪ್ರೋತ್ಸಾಹ ಧನ ಪಾವತಿಸಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ.
