ತುಮಕೂರು[ಜು.21]: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅಧ್ಯಕ್ಷರಾಗಿರುವ ತುಮಕೂರು ಡಿಸಿಸಿ ಬ್ಯಾಂಕ್‌ ಅನ್ನು ಶನಿವಾರ ಸಂಜೆ ರಾಜ್ಯ ಸರ್ಕಾರ ಸೂಪರ್‌ ಸೀಡ್‌ ಮಾಡಿದೆ ಎನ್ನಲಾಗಿದೆ. ಕಳೆದ ಕೆಲವಾರು ತಿಂಗಳಿನಿಂದ ಈ ಬಗ್ಗೆ ವದಂತಿ ಇತ್ತು. ಇದೀಗ ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಮುಂದಿನ ಒಂದು ವರ್ಷದವರೆಗೆ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರ ರಾತ್ರಿ ಬ್ಯಾಂಕ್‌ ಮುಂದೆ ಪೊಲೀಸರನ್ನು ನಿಯೋಜಿಸಿರುವುದು ಈ ಮಾತಿಗೆ ಪುಷ್ಟಿನೀಡಿದೆ.

ಶನಿವಾರ ಸಂಜೆ ಬ್ಯಾಂಕ್‌ನ ಕೆಲ ಸಿಬ್ಬಂದಿ ಕಚೇರಿ ಮುಗಿಸಿಕೊಂಡು ಹೊರಡುವ ವೇಳೆ ಆರು ಪೊಲೀಸರು ಆಗಮಿಸಿದ್ದರಿಂದ ಸಿಬ್ಬಂದಿ ಗಲಿಬಿಲಿಗೊಂಡರು. ಬ್ಯಾಂಕ್‌ ಜನನಿಬಿಡ ರಸ್ತೆಯಲ್ಲಿ ಇದ್ದಿದ್ದರಿಂದ ಒಂದಷ್ಟುಮಂದಿ ಗುಂಪು ಕಟ್ಟಿಕೊಂಡು ಬ್ಯಾಂಕ್‌ ಮುಂದೆ ನಿಂತಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರನ್ನು ಕನ್ನಡಪ್ರಭ ಪ್ರತಿನಿಧಿ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಭಾನುವಾರ ಬೆಳಗ್ಗೆ ವಿವರ ನೀಡುವುದಾಗಿ ತಿಳಿಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಸದಾ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿರುವ ಕೆ.ಎನ್‌.ರಾಜಣ್ಣ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಝೀರೋ ಟ್ರಾಫಿಕ್‌ ಮಂತ್ರಿ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು. ಮಾತ್ರವಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್‌.ಡಿ.ದೇವೇಗೌಡರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಬಳಿಕ ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಸಂಧಾನದ ಬಳಿಕ ನಾಮಪತ್ರ ಹಿಂತೆಗೆದುಕೊಂಡರೂ ಗೌಡರ ಸೋಲಿಗೆ ಕೆ.ಎನ್‌.ರಾಜಣ್ಣ ಅವರೇ ಕಾರಣ ಎಂದು ಆರೋಪಿಸಲಾಗಿತ್ತು. ಶನಿವಾರ ಬೆಳಿಗ್ಗೆಯಷ್ಟೇ ಮೈತ್ರಿ ಸರ್ಕಾರ ಪತನವಾಗುವುದು ಖಂಡಿತ ಎಂದು ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡುವಂತೆ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.