ಬೆಂಗಳೂರು (ಆ. 16): ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗ ಬಾರದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರ ಹಾಗೂ ಮೈತ್ರಿ ಸರ್ಕಾರದ ಆಯವ್ಯಯದಲ್ಲಿ ಪ್ರಸ್ತಾಪಿಸಿದ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

 72 ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರದ ಪ್ರಗತಿ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳುವುದರ ಜತೆಗೆ ರಾಜ್ಯದ ಪ್ರತಿ ಜಿಲ್ಲೆಗಳು ಅತ್ಯುತ್ತಮ ಸ್ಥಾನ ಪಡೆಯಬೇಕು ಎಂದು ಆಶಿಸಿದರು. ನೂರು ವರ್ಷಗಳ ಏಕೀಕರಣದ ಚಳವಳಿ ಯಲ್ಲಿ ಅಖಂಡ ಕರ್ನಾಟಕ ಕೋಟ್ಯಂತರ ಕನ್ನಡಿಗರ ಕನಸಾಗಿದೆ.

ರಾಜ್ಯದ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವ ಮಾತುಗಳು ಆಗಾಗ್ಗೆ ಕೇಳಿಬರುತ್ತಿವೆ. ಮೊಳಕೆ ಒಡೆಯುವ ಮುನ್ನವೇ ಅವುಗಳನ್ನು ಹೊಸಕಿ ಹಾಕುವ ಕನ್ನಡಿಗರ ಆತ್ಮಪ್ರಜ್ಞೆ ಸಂಕಲ್ಪ ಶಕ್ತಿಯ ಪ್ರತೀಕವಾಗಿದೆ ಎಂದು ಹೇಳಿದರು. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ, ಮೂಲ ಸೌಕರ್ಯ ಒದಗಿಸುವುದು ಮಾತ್ರವಲ್ಲ, ಸರ್ವರಿಗೂ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಸರ್ಕಾರದ ಅಭಿವೃದ್ಧಿಯ ಮಾನದಂಡಗಳಾಗಿವೆ. ರೈತರ ಸಂಕಷ್ಟಗಳಿಗೆ ದೂರದೃಷ್ಟಿಯ ಪರಿಹಾರ, ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಆದ್ಯತಾ ವಲಯಗಳಲ್ಲಿ ಪ್ರಮುಖವಾಗಿವೆ ಎಂದರು.

ಬೆಳಗಾವಿಗೆ ಕೆಲವು ಇಲಾಖೆ ಸ್ಥಳಾಂತರ:

ಬೆಳಗಾವಿಗೆ ರಾಜ್ಯ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗೋವಾ, ಕಾಸರಗೋಡು ಮತ್ತು ಸೊಲ್ಲಾಪುರ ಮುಂತಾದ ಗಡಿ ಭಾಗಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ರಕ್ಷಣೆಗೆ ನೆರೆ ರಾಜ್ಯಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.

ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ:

ರಾಜ್ಯ ಸರ್ಕಾರ ಸಹಕಾರಿ, ವಾಣಿಜ್ಯ ಬ್ಯಾಂಕುಗಳಲ್ಲಿರುವ ಸುಮಾರು 49 ಸಾವಿರ ಕೋಟಿ ರು. ಕೃಷಿ ಸಾಲ ಮನ್ನಾ ಮಾಡಲು ತೀರ್ಮಾನಿಸಿದೆ. 20.38 ಲಕ್ಷ ರೈತರು ಲಾಭ ಪಡೆಯಲಿದ್ದಾರೆ. ಇದರ ಜತೆಗೆ ವಾಣಿಜ್ಯ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಲು ಕೂಡ ಸರ್ಕಾರ ಸದ್ಯದಲ್ಲಿಯೇ ಆದೇಶ ಹೊರಡಿಸಲಿದೆ ಎಂದರು.

ಸಾಲ ಮನ್ನಾವೊಂದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕಿದೆ. ಖ್ಯಾತ ಕೃಷಿ ತಜ್ಞ ಡಾ.ಎಂ.ಎಸ್. ಸ್ವಾಮಿನಾಥನ್ ಮತ್ತು ಶೂನ್ಯ ಬಂಡವಾಳ ಕೃಷಿ ಪದ್ಧತಿಯ ಹರಿಕಾರ ಸುಭಾಷ್ ಪಾಳೇಕರ್ ಅವರಿಂದ ಮಾರ್ಗದರ್ಶನ ಪಡೆಯಲಾಗುತ್ತಿದೆ. ರೈತರ ವಿಚಾರದಲ್ಲಿ ರಾಜಕೀಯ ಮಾಡುವುದು ಆರೋಗ್ಯಕರವಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ‘ರೈತ ಸ್ಪಂದನ’ ಕಾರ್ಯಕ್ರಮದ ಮೂಲಕ ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೈತರ ಬದುಕು ಹಸನುಗೊಳಿಸುವುದು ನನ್ನ ಹೊಸ ಚಿಂತನೆಯಾಗಿದೆ ಎಂದರು.

ಚೀನಾ ಮಾದರಿಯಾಗಲಿ:

‘ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಎಂಬ ಪರಿಕಲ್ಪನೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ‘ಕೈಗಾರಿಕಾ ಕ್ಲಸ್ಟರ್’ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಹಾಗೂ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕೌಶಲ್ಯ ಆಧಾರಿತ ವಿಶ್ವವಿದ್ಯಾಲಯ ತೆರೆಯಲು ತೀರ್ಮಾನಿಸಲಾಗಿದೆ ಎಂದರು.

ಶಿಕ್ಷಣವೇ ಶಕ್ತಿ:

ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಎಂದರು