ಬೆಂಗಳೂರು (ಸೆ. 29): ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಒಂದಾದ ಮೇಲೊಂದು ರೋಚಕ ಮಾಹಿತಿ ಸಿಗುತ್ತಿದ್ದು, ಸಿಸಿಬಿ ಅಧಿಕಾರಿಗಳು ರಕ್ತಚಂದನದ ಸ್ಮಗ್ಲರ್ಗಳ ಪಟ್ಟಿಯಲ್ಲಿ ಆದಿಚುಂಚನಗಿರಿ ಮಠಾಧಿಪತಿ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಸಂಖ್ಯೆ ಸೇರಿಸಿ ಕದ್ದಾಲಿಕೆ ನಡೆಸಿದ್ದರು ಎಂಬ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಕೆಲ ತಿಂಗಳ ಹಿಂದೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಸಮೀಪ ರಕ್ತಚಂದನ ಸಾಗಾಣಿಕೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಸಿಸಿಬಿ ಬಂಧಿಸಿತ್ತು. ಬಳಿಕ ಆ ಆರೋಪಿಗಳ ಸುಳಿವಿನ ಮೇರೆಗೆ ಹೊಸಕೋಟೆ ಸಮೀಪದ ಕಟ್ಟಿಗೇನಹಳ್ಳಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಶ್ರೀಗಂಧ ಹಾಗೂ ರಕ್ತ ಚಂದನ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ರಕ್ತಚಂದನ ಸ್ಮಗ್ಲರ್‌ಗಳ ಸಂಪರ್ಕ ಜಾಲವನ್ನು ಜಾಲಾಡಿದ್ದರು. ಆಗ ಶ್ರೀಗಳ ಮೊಬೈಲ್ ಸಂಖ್ಯೆಯನ್ನೂ ಈ ಪಟ್ಟಿಗೆ ಸೇರಿಸಿ ಕದ್ದಾಲಿಕೆ ನಡೆಸಿದ್ದರು ಎನ್ನಲಾಗುತ್ತಿದೆ.

ಫೋನ್ ಟ್ಯಾಪಿಂಗ್: CBI ಗೂಗ್ಲಿಗೆ ಅಲೋಕ್ ಕುಮಾರ್ ಕನ್ಫ್ಯೂಸ್ !

ರಕ್ತಚಂದನ ಕಳ್ಳತನದ ಕೃತ್ಯ ಬೆಳಕಿಗೆ ಬಂದ ವೇಳೆ ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಚಲನಚಿತ್ರ ನಟ, ಹಿರಿಯ ರಾಜಕಾರಣಿ ದಿ.ಅಂಬರೀಷ್ ಪತ್ನಿ ಸುಮಲತಾ ನಡುವೆ ಸಮರ ತಾರಕಕ್ಕೇರಿತ್ತು. ಮಗನ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದ ಮುಖ್ಯಮಂತ್ರಿಗಳು, ಚುನಾವಣೆಯಲ್ಲಿ ಸುಮಲತಾ ಅವರಿಗೆ ಆದಿಚುಂಚನಗಿರಿ ಶ್ರೀಗಳು ಬೆಂಬಲಿಸಿರಬಹುದು ಎಂಬ ಬಗ್ಗೆ ಅನುಮಾನಗೊಂಡಿದ್ದರು ಎನ್ನಲಾಗಿದೆ.

ಹೀಗಾಗಿ ಶ್ರೀಗಳ ಚಲ ನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗಿನ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಅವರಿಗೆ ಸೂಚಿಸಿದ್ದರು ಎನ್ನಲಾಗಿದ್ದು, ಅದರಂತೆ ಸಿಸಿಬಿ ಅಧಿಕಾರಿಗಳು, ರಕ್ತಚಂದನ ಕಳ್ಳಸಾಗಾಣಿಕೆ ಪ್ರಕರಣದ ಸ್ಮಗ್ಲರ್‌ಗಳ ಜತೆ ಶ್ರೀಗಳ ಫೋನ್ ಸಂಖ್ಯೆಯನ್ನೂ ಸೇರಿಸಿದ್ದಾರೆ. ಬಳಿಕ ಗೃಹ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳ ಒಪ್ಪಿಗೆ ಪಡೆದು ಆದಿಚುಂಚನ ಗಿರಿ ಶ್ರೀಗಳು ಮತ್ತು ಅವರ ಆಪ್ತ ಸಹಾಯಕರ ಮೊಬೈಲ್ ಕರೆಗಳನ್ನು ಸಿಸಿಬಿ ಪೊಲೀಸರು ಕದ್ದಾಲಿಸಿದ್ದರು ಎಂದು ಹೇಳಲಾಗಿದೆ.

ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ಯಾರು?: ಬಾಯ್ಬಿಟ್ಟ ಅಲೋಕ್ ಕುಮಾರ್

ಪ್ರತ್ಯೇಕ ಲಾಗಿನ್: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಡೆಯುವ ಮೊಬೈಲ್ ಕರೆಗಳ ಕದ್ದಾಲಿಕೆಗೆ ಸಿಸಿಬಿ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಪ್ರತ್ಯೇಕವಾದ ಲಾಗಿನ್ ಮಾಡಿ ಸಂಭಾಷಣೆ ಕೇಳುತ್ತಿದ್ದರು. ಲೋಕಸಭಾ ಚುನಾವಣೆ ವೇಳೆ ಮುಖ್ಯಮಂತ್ರಿಗಳು ಕಳುಹಿಸಿದ ನಂಬರ್‌ಗಳು ಅಲೋಕ್ ಕುಮಾರ್ ಮೂಲಕ ಮಾಲತೇಶ್ ಎಂಬುವರಿಗೆ ತಲುಪುತ್ತಿದ್ದವು ಎಂದು ಸಿಬಿಐ ಮೂಲಗಳು ಹೇಳಿವೆ.

ಸ್ಮಗ್ಲರ್ ಪಟ್ಟಿಯಲ್ಲಿ  ಸುಮಲತಾ, ದರ್ಶನ್, ಯಶ್ ಸಂಖ್ಯೆ?

ಲೋಕಸಭಾ ಚುನಾವಣಾ ಸಮರದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಮಂಡ್ಯ ಕ್ಷೇತ್ರದ ಹಲವು ರಾಜಕಾರಣಿಗಳ ಮೊಬೈಲ್ ಕರೆಗಳನ್ನು ಸಹ ಸಿಸಿಬಿ ಅಧಿಕಾರಿಗಳು ಕದ್ದಾಲಿಸಿದ್ದರು ಎಂದು ಹೇಳಲಾಗುತ್ತಿದೆ.

ಇವರ ಫೋನ್ ಸಂಖ್ಯೆಗಳನ್ನು ಕೂಡ ರಕ್ತಚಂದನ ಸಾಗಣೆ ಖದೀಮರ ಪಟ್ಟಿಯಲ್ಲಿ ಸೇರಿಸಿ ಕದ್ದಾಲಿಸಿದ್ದರು. ಈ ಎಲ್ಲಾ ಕರೆಗಳನ್ನು ಸಿಸಿಬಿ ತಾಂತ್ರಿಕ ವಿಭಾಗದಲ್ಲೇ ಕದ್ದಾಲಿಕೆ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!