ಸುಖಿ ಕ್ಲಿನಿಕ್ - ಡಾ. ಬಿ.ಆರ್. ಸುಹಾಸ್

1. ನಾನು ವಿವಾಹಿತ. ಸಂಭೋಗಿಸಲು ಶುರುಮಾಡಿದ ಎರಡೇ ನಿಮಿಷದಲ್ಲಿ ಸ್ಖಲನವಾಗುತ್ತದೆ. ಮತ್ತೆ ನನ್ನ ಜನನಾಂಗ ನಿಮಿರಿಕೊಳ್ಳಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. 10-15 ನಿಮಿಷದೊಳಗೆ ಲೈಂಗಿಕಾಸಕ್ತಿ ಪುಟಿಯಲು ಏನಾದರೂ ಔಷಧಗಳಿವೆಯೇ?

-ಜೀವನ್, ಮೈಸೂರು

ಉತ್ತರ: ಶೀಘ್ರ ವೀರ್ಯಸ್ಖಲನ ಒಂದು ಸಾಮಾನ್ಯ ಸಮಸ್ಯೆ. ಇದಕ್ಕೆ ಬೇಗನೆ ಉದ್ರಿಕ್ತವಾಗುವ ಮನಃಸ್ಥಿತಿಯೇ ಕಾರಣ. ಬೇಗನೆ ಉದ್ರಿಕ್ತರಾಗದಿರಲು ಹೆಚ್ಚಿನ ಹೊತ್ತು ಸಂಭೋಗಪೂರ್ವ ರತಿಯಾಟಗಳಲ್ಲಿ ತೊಡಗಿ, ಆಗ ಒಮ್ಮೆಲೇ ಉದ್ರಿಕ್ತಗೊಳ್ಳುವುದು ತಪ್ಪಿ ಸಂಭೋಗ ಸ್ವಲ್ಪ ನಿಧಾನವಾಗುತ್ತದೆ. ಸಂಭೋಗವೊಂದರಲ್ಲೇ ಮನಸ್ಸನ್ನು ಕೇಂದ್ರೀಕರಿಸದೆ ಒಟ್ಟಾರೆ ಪ್ರೇಮಕ್ರೀಡೆಯಲ್ಲಿ ಒಲವು ಬೆಳೆಸಿಕೊಳ್ಳಿ. ಹಲವಾರು ವ್ಯಂಜನಗಳೂ ಸಿಹಿತಿಂಡಿಗಳೂ ಇರುವ ದೊಡ್ಡ ಭೋಜನ, ಇಲ್ಲವೇ ಮೂಲಕಥೆಯಷ್ಟೇ ಅಲ್ಲದೆ ಹಾಸ್ಯ, ಸಾಹಸ, ದೃಶ್ಯಾವಳಿಗಳು, ಸಂಗೀತ, ಎಲ್ಲವೂ ಇರುವ ಸಮಗ್ರ ಚಲನಚಿತ್ರದ ಹಾಗೆ ರತಿಕ್ರೀಡೆಯೂ ಸಮಗ್ರವಾಗಿದ್ದರಷ್ಟೇ ಸಂಪೂರ್ಣ ಸುಖ ಕೊಡುತ್ತದೆ. ಇನ್ನೊಂದು ವಿಷಯವೆಂದರೆ, ಸಂಭೋಗ ಮಾಡುವಾಗ ಸ್ಖಲನವಾಗುತ್ತದೆ ಎನಿಸಿದ ಕೂಡಲೇ ಬೇರೆ ವಿಷಯದ ಕಡೆಗೆ ಗಮನ ಹರಿಸಿ. ಅನಂತರ ಮುಂದುವರಿಸಿ. ಅಂತೆಯೇ ನೀವೊಬ್ಬರೇ ಹಸ್ತಮೈಥುನ ಮಾಡಿಕೊಳ್ಳುತ್ತಾ, ಇನ್ನೇನು ಸ್ಖಲನವಾಗುತ್ತದೆ ಎನಿಸಿದಾಗ ನಿಲ್ಲಿಸಿ ಮತ್ತೆ ಮುಂದುವರಿಸಿ. ಹೀಗೆ ಸಾಧ್ಯವಾದಷ್ಟು ಬಾರಿ ಸ್ಖಲನವನ್ನು ಮುಂದೂಡುವ ಅಭ್ಯಾಸ ಮಾಡಿಕೊಂಡರೆ ಕ್ರಮೇಣ ಸ್ಖಲನ ನಿಧಾನವಾಗುತ್ತಾ ಹೋಗುತ್ತದೆ. ಇದನ್ನು ರತಿವಿಜ್ಞಾನದಲ್ಲಿ ‘ಸ್ಟಾಪ್ ಸ್ಟಾರ್ಟ್ ಟೆಕ್ನಿಕ್’ ಎನ್ನುತ್ತಾರೆ. ಸ್ಖಲನವಾದ ಬಳಿಕ ಬೇಗನೆ ಲೈಂಗಿಕಾಸಕ್ತಿ ಪುಟಿಯಲು ಯಾವುದೇ ಔಷಧಿಗಳಿಲ್ಲ. ಆಗ ಪುನಃ ರತಿಮುನ್ನಲಿವಿನಾಟದಿಂದಲೇ ಲೈಂಗಿಕಾಸಕ್ತಿ ವರ್ಧಿಸಬೇಕು. ಎರಡನೆಯ ಬಾರಿಯ ಸಂಭೋಗ ನಿಮಗೆ ನಿಧಾನವಾಗಿಯೂ ಆಗುತ್ತದೆ. ಅದು ನಿಮಗೆ ಒಳ್ಳೆಯದೇ ಅಲ್ಲವೇ?

2. ನಾನು ಅವಿವಾಹಿತ. ಜನನಾಂಗದ ಸುತ್ತಲಿನ ಚರ್ಮದಲ್ಲಿ ರ‌್ಯಾಶಸ್ ಕಾಣಿಸಿಕೊಂಡಿದೆ. ರಕ್ತಪರೀಕ್ಷೆ ಮಾಡಿಸಿದರೆ, ಸಮಸ್ಯೆ ಏನೆಂದು ಗೊತ್ತಾಗುತ್ತದಾ? ಎಚ್‌ಐವಿ ಬಂದಿದೆಯೆಂಬ ಶಂಕೆ ಕಾಡುತ್ತಿದೆ. ಈ ಆತಂಕಕ್ಕೆ ಪರಿಹಾರ ತಿಳಿಸಿ.

- ದೀಪು, ಊರುಬೇಡ

ಉತ್ತರ: ಜನನಾಂಗದ ಸುತ್ತಲೂ ಇರುವ ರ್ಯಾಶಸ್ ಯಾವ ರೀತಿಯದು ಎಂದು ನೋಡದೇ ಹೇಳಲಾಗುವುದಿಲ್ಲ. ರಕ್ತಪರೀಕ್ಷೆಯಿಂದ ತಿಳಿಯುವುದಿಲ್ಲ. ಅದು ಎಚ್‌ಐವಿಯೇನಲ್ಲ. ಎಚ್‌ಐವಿ ಇದೆಯೇ ಎಂದು ತಿಳಿಯಲು ರಕ್ತಪರೀಕ್ಷೆ ಮಾಡಿಸಬೇಕಾಗುತ್ತದೆ. ಅಂಥ ಆತಂಕವಿದ್ದರೆ ಮಾಡಿಸಿ. ಆದರೆ, ಮೊದಲಿಗೆ ರ್ಯಾಶಸ್’ಗಾಗಿ ಹತ್ತಿರದ ಚರ್ಮ ಮತ್ತು ಲೈಂಗಿಕರೋಗ ತಜ್ಞರಿಗೆ ತೋರಿಸಿ. ಅವರ ಬಳಿ ನಿಮ್ಮ ಸಂಪೂರ್ಣ ಚರಿತ್ರೆ ಹೇಳಿ. ಅಗತ್ಯವಿದ್ದರೆ ಎಚ್‌ಐವಿ ಪರೀಕ್ಷೆಯನ್ನು ಅವರೇ ಮಾಡಿಸುತ್ತಾರೆ.