Asianet Suvarna News Asianet Suvarna News

ಸರ್ಕಾರದಲ್ಲಿ ಕೊಳೆಯುತ್ತಿದೆ ಸಕ್ಕರೆ, ಉಪ್ಪು, ಎಣ್ಣೆ

ಅನ್ನಭಾಗ್ಯದಡಿ ಅಕ್ಕಿ 2 ಕೇಜಿ ಹೆಚ್ಚಿಸಿ ಸಕ್ಕರೆ, ಉಪ್ಪು, ತಾಳೆಣ್ಣೆ ವಿತರಣೆ ನಿಲ್ಲಿಸಿದ ಸರ್ಕಾರ | ಗೋದಾಮಿನಲ್ಲಿ ಭಾರಿ ದಾಸ್ತಾನು: ಕೆಡುವ ಸಾಧ್ಯತೆ

Sugar Salt and Oil Rotting in Govt Godowns
  • Facebook
  • Twitter
  • Whatsapp

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ತಲಾ ವ್ಯಕ್ತಿಗೆ ಅಕ್ಕಿ ವಿತರಣೆ ಪ್ರಮಾಣ 5 ಕೇಜಿಯಿಂದ 7 ಕೇಜಿಗೆ ಏಪ್ರಿಲ್‌ನಿಂದ ಹೆಚ್ಚಿಸಿರುವ ರಾಜ್ಯ ಸರ್ಕಾರ, ಇದೇ ವೇಳೆ ತಾಳೆ ಎಣ್ಣೆ, ಉಪ್ಪು ಹಾಗೂ ಸಕ್ಕರೆ ವಿತರಣೆ ನಿಲ್ಲಿಸಿದೆ. ಹೀಗಾಗಿ ರಾಜ್ಯದ ಸರ್ಕಾರಿ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ 12 ಸಾವಿರ ಟನ್‌ ಉಪ್ಪು, ಆರೂವರೆ ಸಾವಿರ ಟನ್‌ ಸಕ್ಕರೆ ಹಾಗೂ ಸುಮಾರು 5 ಸಾವಿರ ಕಿಲೋ ಲೀಟರ್‌ ತಾಳೆ ಎಣ್ಣೆ ವಿತರಣೆಯಾಗದೇ ಕೊಳೆಯುತ್ತಿದೆ!
ದಾಸ್ತಾನಿರುವ ಆರೂವರೆ ಸಾವಿರ ಟನ್‌ ಸಕ್ಕರೆಯ ಮೌಲ್ಯ 31 ಕೋಟಿ ರು., 5 ಸಾವಿರ ಕಿಲೋ ಲೀಟರ್‌ ತಾಳೆ ಎಣ್ಣೆ ಮೌಲ್ಯ . 33 ಕೋಟಿ ಹಾಗೂ 12 ಸಾವಿರ ಟನ್‌ ಉಪ್ಪಿನ ಮೌಲ್ಯ . 3 ಕೋಟಿ ರು.ಗಳಾಗಿದೆ.

ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಉಪ್ಪು ಮತ್ತು ತಾಳೆ ಎಣ್ಣೆ ವಿತರಣೆಗೆ ಬ್ರೇಕ್‌ ಹಾಕಿದ್ದರ ಪರಿಣಾಮ ಸರ್ಕಾರಿ ಗೋದಾಮಿನಲ್ಲಿ ಕೋಟ್ಯಂತರ ಮೌಲ್ಯದ ಪದಾರ್ಥ ಕೊಳೆಯುವಂತಾಗಿದೆ. ಹೀಗಾಗಿ ಸರ್ಕಾರ ಕನಿಷ್ಠ ಮುಂದಿನ ಮೂರು ತಿಂಗಳಿಗೆ ಈ ಪದಾರ್ಥಗಳನ್ನು ಬಿಪಿಎಲ್‌ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಇಲ್ಲವೇ ಅನ್ಯ ಇಲಾಖೆಗಳಿಗೆ ಹಸ್ತಾಂತರಿಸಬೇಕಿದೆ. ಆದರೆ ಈವರೆಗೂ ರಾಜ್ಯದ ವಿವಿಧ ಜಿಲ್ಲೆಗಳ ಗೋದಾಮುಗಳಲ್ಲಿ ದಾಸ್ತಾನು ಇರುವ ಪದಾರ್ಥಗಳ ಬಗೆಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ರಾಜ್ಯ ಸರ್ಕಾರ ಪ್ರತಿ ತಿಂಗಳು 1.2 ಕೋಟಿ ಕುಟುಂಬಗಳಿಗೆ 5 ಕೇಜಿ ಅಕ್ಕಿ, ತಲಾ ಒಂದು ಕೇಜಿ ಸಕ್ಕರೆ, ಉಪ್ಪು ಹಾಗೂ ಒಂದು ಲೀಟರ್‌ ತಾಳೆ ಎಣ್ಣೆ ವಿತರಿಸುತ್ತಿತ್ತು. ಈ ವರ್ಷದ ಬಜೆಟ್‌ನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿಯ ಪ್ರಮಾಣ ವನ್ನು ತಲಾ ವ್ಯಕ್ತಿಗೆ 7 ಕೇಜಿಗೆ ಹೆಚ್ಚಳ ಮಾಡಿ ಘೋಷಣೆ ಮಾಡಿದರು. ಅಕ್ಕಿ ಹೆಚ್ಚಳವನ್ನು ಸರ್ಕಾರ ಘೋಷಣೆ ಮಾಡಿತೇ ಹೊರತು ಸಕ್ಕರೆ, ಉಪ್ಪು ಹಾಗೂ ತಾಳೆ ಎಣ್ಣೆ ರದ್ದುಪಡಿಸುವ ವಿಚಾರವನ್ನು ಘೋಷಣೆ ಮಾಡಲಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಸಕ್ಕರೆ ವಿತರಣೆ ನಿಲ್ಲಿಸಿದೆ ಎಂಬ ಕಾರಣಕ್ಕೆ ಸಕ್ಕರೆ ವಿತರಣೆ ನಿಲ್ಲಿಸಿ, ಅದರ ಜತೆ ರಾಜ್ಯ ಸರ್ಕಾರದಿಂದ ವಿತರಿಸಲಾಗುತ್ತಿದ್ದ ಉಪ್ಪು ಮತ್ತು ತಾಳೆ ಎಣ್ಣೆ ವಿತರಣೆಯನ್ನೂ ನಿಲ್ಲಿಸಿತು.

ರಾಜ್ಯ ಸರ್ಕಾರದ ನಿರ್ಧಾರದಂತೆ ಏಪ್ರಿಲ್‌ 1ರಿಂದ ಅಕ್ಕಿ ವಿತರಣೆ ಪ್ರಮಾಣ 5 ಕೇಜಿಯಿಂದ 7 ಕೇಜಿಗೆ ಹೆಚ್ಚಳವಾಯಿತು. ಇದೇ ವೇಳೆ ಏಪ್ರಿಲ್‌ ತಿಂಗಳ ಆಹಾರ ವಿತರಣೆ ಅಧಿಸೂಚನೆ ವೇಳೆ ಪದಾರ್ಥಗಳ ಪಟ್ಟಿಯಿಂದ ತಾಳೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಕೈಬಿಟ್ಟು, ಅಧಿಸೂಚನೆ ಪ್ರಕಟಿಸಲಾಯಿತು. ಹೀಗಾಗಿ ರಾಜ್ಯದ ಸುಮಾರು 26 ಜಿಲ್ಲೆಗಳಲ್ಲಿ ಸಾವಿರಾರು ಮೆಟ್ರಿಕ್‌ ಟನ್‌ ಉಪ್ಪು ಮತ್ತು ಸಕ್ಕರೆ ಹಾಗೂ ಸಾವಿರಾರು ಕಿಲೋ ಲೀಟರ್‌ ತಾಳೆ ಎಣ್ಣೆ ದಾಸ್ತಾನು ಉಳಿದಿದೆ. ಹೀಗಾಗಿ ಸರ್ಕಾರ ಮುಂದಾಲೋಚನೆ ಇಲ್ಲದೇ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಹಸ್ತಾಂತರಕ್ಕೆ ಚಿಂತನೆ: ಸಾವಿರಾರು ಟನ್‌ನಷ್ಟಿರುವ ಉಪ್ಪು, ಸಕ್ಕರೆ ಹಾಗೂ ಭಾರಿ ಪ್ರಮಾಣದ ತಾಳೆ ಎಣ್ಣೆ ಸದ್ಯ ಸರ್ಕಾರಿ ಗೋದಾಮುಗಳಲ್ಲಿದೆ. ಈ ಪದಾರ್ಥಗಳನ್ನು ಕೂಡಲೇ ಬಳಕೆ ಮಾಡದಿದ್ದರೆ ಹೆಗ್ಗಣಗಳಿಗೆ ಆಹಾರವಾಗುತ್ತದೆ ಇಲ್ಲವೇ ಸೋರಿಕೆ ಆರಂಭವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ತನ್ನ ಬೇರೆ ಬೇರೆ ಇಲಾಖೆಗಳಿಗೆ ಇದನ್ನು ವರ್ಗಾವಣೆ ಮಾಡಬೇಕಿದೆ. ಮೂಲಗಳ ಪ್ರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳಿಗೆ, ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಇದನ್ನು ವರ್ಗಾವಣೆ ಮಾಡುವ ಚಿಂತನೆ ನಡೆದಿದೆ. ಆದರೆ ಈ ಬಗ್ಗೆ ಅಂತರ್‌ ಇಲಾಖೆ ಚರ್ಚೆ ನಡೆದು, ಒಮ್ಮತ ಏರ್ಪಟ್ಟು ಆಹಾರ ಪದಾರ್ಥ ಹಸ್ತಾಂತರ ಆಗುವ ವೇಳೆಗೆ ಗೋದಾಮಿನಲ್ಲಿ ಎಷ್ಟುಪ್ರಮಾಣದ ಪದಾರ್ಥ ಉಳಿದಿರುತ್ತದೆ ಎಂಬುದು ಯಕ್ಷ ಪ್ರಶ್ನೆ.

ಈ ಮಧ್ಯೆ ಮುಂದಿನ ವರ್ಷ ಚುನಾವಣೆ ಇರುವುದರಿಂದ 2 ಕೇಜಿ ಅಕ್ಕಿ ಹೆಚ್ಚಳ ನೆಪದಲ್ಲಿ ಉಪ್ಪು, ಸಕ್ಕರೆ ಮತ್ತು ತಾಳೆ ಎಣ್ಣೆ ವಿತರಣೆ ರದ್ದುಪಡಿಸುವುದು ಬೇಡ ಎಂದು ಅನೇಕ ಶಾಸಕರು ಈಗಾಗಲೇ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗುತ್ತಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios