ಕಿಚ್ಚನನ್ನು ನಾವು ಇಂಥ ಹೀರೋಯಿಸಂ ಸಿನಿಮಾಗಳಲ್ಲೇ ನೋಡಬೇಕೆಂಬ ಬಯಕೆ ಅಭಿಮಾನಿಗಳದ್ದು. ಆದರೆ, ಸ್ವತಃ ಸುದೀಪ್‌ಗೆ ಎಂಥ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆಯಿದೆ ಗೊತ್ತಾ?

ಹೀರೋಗಳಿಗೆ ಅಭಿಮಾನಿಗಳು ಸಾವಿರ. ತಮ್ಮ ಇಷ್ಟದ ನಟ ಇಂಥ ಸಿನಿಮಾದಲ್ಲೇ ನಟಿಸಬೇಕೆಂಬ ಆರಾಧನೆಗೆ ಅಂಟಿಕೊಂಡ ಬಯಕೆ ಎಲ್ಲ ಅಭಿಮಾನಿಗಳಲ್ಲೂ ಇರುತ್ತೆ. ಆದರೆ, ಒಬ್ಬ ನಟನಿಗೆ ತಾನು ಎಂಥ ಸಿನಿಮಾಗಳಲ್ಲಿ ನಟಿಸಿದರೆ ಚೆನ್ನ ಎಂಬ ಬಯಕೆ ಇರುತ್ತಾ? ಇದ್ದರೂ ಅವರು ಹೇಳಿಕೊಳ್ಳುವುದಿಲ್ಲ. ಕಾರಣ, ಆ ರೀತಿಯ ಸಿನಿಮಾಗಳಿಗೆ ಬ್ರಾಂಡ್ ಮಾಡುತ್ತಾರೆಂಬ ಭಯ! ಆದರೆ, ಕಿಚ್ಚ ಸುದೀಪ್ ಮಾತ್ರ ತಮ್ಮ ಇಷ್ಟದ ಸಿನಿಮಾಗಳ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

‘ಮಕುಂದ ಮುರಾರಿ’ಯಂಥ ಸಿನಿಮಾಗಳನ್ನು ಸುದೀಪ್ ಹೆಚ್ಚು ಪ್ರೀತಿಸುತ್ತಾರೆ. ಕತೆ ಪ್ರಧಾನವಾಗಿದ್ದು, ಹೀರೋಯಿಸಂ ಇಲ್ಲದಿದ್ದರೂ ಪರ್ವಾಗಿಲ್ಲ ಎನ್ನುವಂಥ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಸುದೀಪ್ ಮನ ಹಾತೊರೆಯುತ್ತದೆ. ಈ ಕಾರಣಕ್ಕೆ ಅವರು ‘ರಣ್’, ‘ಈಗ’ ಹಾಗೂ ‘ಬಾಹುಬಲಿ’ಯಲ್ಲಿ ಇಂಥದ್ದೇ ಪಾತ್ರಗಳನ್ನು ಒಪ್ಪಿಕೊಂಡಿದ್ದರು. ‘ನನಗೆ ನನ್ನ ಚಿತ್ರಗಳ ಮೂಲಕ ಏನನ್ನಾದಾರೂ ಹೇಳಬೇಕೆಂಬ ತುಡಿತ ಸದಾ ಕಾಡುತ್ತಿರುತ್ತದೆ. ಸಿನಿಮಾಗಳ ಮೂಲಕ ಒಳ್ಳೆಯ ವಿಚಾರಗಳು ಸಮಾಜಕ್ಕೆ ತಲುಪುವಂತಿದ್ದರೆ ಅಂಥ ಪಾತ್ರಗಳಲ್ಲಿ ನಟಿಸಲು ನನಗೇನೂ ಅಭ್ಯಂತರ ಇಲ್ಲ. ಈ ಕಾರಣಕ್ಕೆ ಮುಕುಂದ ಮುರಾರಿ ಸಿನಿಮಾ ಒಪ್ಪಿಕೊಂಡೆ. ಇಲ್ಲಿ ಇಬ್ಬರು ಹೀರೋಗಳಿದ್ದರೂ ಯಾರನ್ನೂ ವೈಭವೀಕರಿಸಿಲ್ಲ. ನನ್ನ ಮತ್ತು ಉಪೇಂದ್ರ ಅವರನ್ನು ಇಟ್ಟುಕೊಂಡು ಎಂಥ ಹೀರೋಯಿಸಂ ಸಿನಿಮಾ ಮಾಡುವುದಕ್ಕೂ ಅವಕಾಶವಿತ್ತು. ಆದರೆ, ನಿರ್ದೇಶಕರು ನಮ್ಮ ಸ್ಟಾರ್‌ಗಿರಿಯತ್ತ ಗಮನ ಕೊಟ್ಟಿಲ್ಲ. ಕತೆಯತ್ತ ಆಸ್ಥೆ ವಹಿಸಿದರು. ಸದಾ ಚರ್ಚೆಯಲ್ಲಿರುವ ದೇವರು, ಧರ್ಮ, ಮನುಷ್ಯ, ಮಾನವೀಯತೆ ಇಂಥ ಅಂಶಗಳನ್ನು ಒಳಗೊಂಡಿರುವ ಮುಕುಂದ ಮುರಾರಿ ಸಿನಿಮಾ ರಿಮೇಕ್ ಆದರೂ, ಈ ಚಿತ್ರದಲ್ಲಿ ಮತ್ತೊಬ್ಬ ಹೀರೋ ಇದ್ದರೂ ನಾನು ಒಪ್ಪಿಕೊಂಡೆ. ತುಂಬಾ ವರ್ಷಗಳ ನಂತರ ನನ್ನ ನಟನೆಯ ಚಿತ್ರವನ್ನು ಬಿಡುಗಡೆಯಾದ ಮೊದಲ ದಿನವೇ ಥಿಯೇಟರ್‌ಗೆ ಹೋಗಿ ನೋಡಿದ್ದೂ ಇದೇ ಕಾರಣಕ್ಕೆ’ ಎನ್ನುತ್ತಾರೆ ಸುದೀಪ್.

ಕತೆ ಚೆನ್ನಾಗಿದ್ದರೆ ಅದರಲ್ಲಿ ಫೈಟ್, ಹಾಡು, ಡ್ಯಾನ್ಸ್‌ನಂಥ ಯಾವುದೇ ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲದಿದ್ದರೂ ಸುದೀಪ್ ನಟಿಸುತ್ತಾರಂತೆ. ಸಿನಿಮಾಗಳು ಚರ್ಚೆಗೊಳಪಡುವುದು ಅವರಿಗೊಂದು ಖುಷಿ. ಅಂಥ ಸಿನಿಮಾಗಳ ಜೊತೆ ನಾನು ಸದಾ ಇರುತ್ತೇನೆ ಎನ್ನುತ್ತಾರವರು. ಚಿತ್ರರಂಗದಿಂದ ಮರೆಯಾದ ಮೇಲೂ ಒಬ್ಬ ಕಲಾವಿದನನ್ನು ಜನ ನೆನಪಿನಲ್ಲಿಟ್ಟುಕೊಳ್ಳುವುದು ಇಂಥ ಸಿನಿಮಾಗಳಿಂದಲೇ ಎಂಬುದು ಕಿಚ್ಚನ ನಂಬಿಕೆ. ಆ ನಂಬಿಕೆ ಮತ್ತು ಭರವಸೆಯಲ್ಲೇ ಅವರು ‘ಮುಕುಂದ ಮುರಾರಿ’ಯನ್ನು ಒಪ್ಪಿಕೊಂಡರಂತೆ.