ಬೆಳಗಾವಿಗೆ ಬರುವುದಾಗಿ ಹೇಳಿದ್ದ ನಾಯಕ ನಟ ಸುದೀಪ್ ಭರವಸೆ ಹುಸಿಯಾಗಿದ್ದರಿಂದ ಉಪವಾಸ ನಿರತರಾಗಿದ್ದ ಅಭಿಮಾನಿಗಳಿಬ್ಬರು ಅಸ್ವಸ್ಥರಾಗಿ ಬುಧವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ (ಏ.12): ಬೆಳಗಾವಿಗೆ ಬರುವುದಾಗಿ ಹೇಳಿದ್ದ ನಾಯಕ ನಟ ಸುದೀಪ್ ಭರವಸೆ ಹುಸಿಯಾಗಿದ್ದರಿಂದ ಉಪವಾಸ ನಿರತರಾಗಿದ್ದ ಅಭಿಮಾನಿಗಳಿಬ್ಬರು ಅಸ್ವಸ್ಥರಾಗಿ ಬುಧವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಸಚಿನ್ ಬಾಳಪ್ಪ ಪಾಟೀಲ (18), ಪ್ರವೀಣ ಯಲ್ಲಪ್ಪ ಪಾಟೀಲ (18) ಅಸ್ವಸ್ಥರಾದ ಅಭಿಮಾನಿಗಳು. ಹೆಬ್ಬುಲಿ ಚಿತ್ರ ಬಿಡುಗಡೆಯಾದ ವೇಳೆ ನಾಯಕ ಸುದೀಪ ಚಿತ್ರದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದ ವೇಳೆ ಬೆಳಗಾವಿಗೆ ಬರುವುದಾಗಿ ತಿಳಿಸಿ ಹುಬ್ಬಳ್ಳಿಯಿಂದ ಮರಳಿ ಬೆಂಗಳೂರಿಗೆ ತೆರಳಿದ್ದರು. ಇದರಿಂದ ನೊಂದ ಇವರಿಬ್ಬರು ಮಾ.೮ರಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ನಟ ಸುದೀಪ್ ಶೀಘ್ರದಲ್ಲಿ ಬೆಳಗಾವಿ ಬಂದು ಭೇಟಿ ಮಾಡುವುದಾಗಿ ತಿಳಿಸಿದ್ದಲ್ಲದೇ, ಬೆಂಗಳೂರಿಗೆ ಕರೆಸಿ ಬುದ್ಧಿವಾದ ಹೇಳಿ, ೫೦ ದಿನಗಳಲ್ಲಿ ಬೆಳಗಾವಿ ಬರುವುದಾಗಿ ಭರವಸೆ ನೀಡಿದ್ದರು.

ಆದರೆ ಇವರಿಬ್ಬರ ಸ್ನೇಹಿತರು ನಿಮಗೆ ಸುದೀಪ್ ಸುಳ್ಳು ಹೇಳಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇದರಿಂದ ಮನನೊಂದ ಇಬ್ಬರು ಅಭಿಮಾನಿಗಳು ಭೂತರಾಮನಹಟ್ಟಿ ಗ್ರಾಮದಲ್ಲಿ ಕಳೆದ ವಾರದಿಂದ ಉಪವಾಸ ನಿರತರಾಗಿ ಪ್ರತಿಭಟಿಸುತ್ತಿದ್ದರು. ಬುಧವಾರ ತೀವ್ರ ಅಸ್ವಸ್ಥರಾಗಿದ್ದರಿಂದ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.