ಬೆಂಗಳೂರು[ಜೂ.29] :  ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ಹಾಗೂ ಸಬರ್ಬನ್‌ ರೈಲು ತುಮಕೂರುವರೆಗೂ ಸಂಚರಿಸುವಂತೆ ಜಾಲ ವಿಸ್ತರಿಸುವ ಚಿಂತನೆ ಹೊಂದಿರುವುದಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರ ಕೆಂಪೇಗೌಡ ರಸ್ತೆಯಲ್ಲಿರುವ ಸರ್‌ ಎಂ.ವಿ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 102ನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನ ಸಂಪರ್ಕ ಜಾಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೆಟ್ರೋ ರೈಲು ಮತ್ತು ಸಬರ್ಬನ್‌ ರೈಲು ಸಂಪರ್ಕಗಳನ್ನು ವಿಸ್ತರಣೆ ಮಾಡಬೇಕಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಬೆಂಗಳೂರು ಜತೆಗೆ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ತುಮಕೂರಿನಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗುತ್ತಿದೆ. ಅತಿದೊಡ್ಡ ಕೈಗಾರಿಕಾ ಹಬ್‌ ಆಗಿ ತುಮಕೂರು ಹೊರಹೊಮ್ಮಲಿದೆ. ಈ ಸಂಬಂಧ ಸುಮಾರು 80 ಸಾವಿರ ಎಕರೆಯಷ್ಟುಜಮೀನು ಸ್ವಾಧೀನಕ್ಕೆ ಅಂದಾಜಿಸಲಾಗಿದೆ. ಈಗಾಗಲೇ 3ರಿಂದ 4 ಸಾವಿರ ಎಕರೆ ಪ್ರದೇಶ ಅಭಿವೃದ್ಧಿಪಡಿಸಿ ಕೈಗಾರಿಕೆಗಳಿಗೆ ಹಸ್ತಾಂತರಿಸಲಾಗಿದೆ. ಸುಮಾರು 105 ಕೈಗಾರಿಕೆಗಳು ಕಾರ್ಯಾರಂಭ ಮಾಡಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ, ಬೀದರ್‌ ಸೇರಿದಂತೆ ಹಲವು ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರವು ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಐಟಿ-ಬಿಟಿ, ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ 32 ಕ್ಷೇತ್ರಗಳಲ್ಲಿ ನಂಬರ್‌ ಒನ್‌ ಆಗಲಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ ಎಂದರು.

ನಾವು ವಿಧಾನಸೌಧದಲ್ಲಿ ರಾಜಕೀಯ ಆಟವನ್ನೂ ಆಡುತ್ತೇವೆ. ಆದರ ಜತೆಗೆ ಅಭಿವೃದ್ಧಿಗೂ ಗಮನ ಹರಿಸುತ್ತೇವೆ. ಎರಡನೇ ಹಂತದ ನಗರಗಳ ಪೈಕಿ ಬಳ್ಳಾರಿಯಲ್ಲಿ ಜೀನ್ಸ್‌ ಬಟ್ಟೆಗಳ ತಯಾರಿಕೆ ಹೆಚ್ಚಾಗಿದೆ. ಆ ಜಿಲ್ಲೆಯಲ್ಲಿ ಜೀನ್ಸ್‌ ಕ್ಲಸ್ಟರ್‌ ಗುರುತಿಸಲಾಗಿದೆ. ತುಮಕೂರಿನಲ್ಲಿ ಕ್ರೀಡಾ ಸಾಮಾಗ್ರಿಗಳ ಕ್ಲಸ್ಟರ್‌ ಮತ್ತು ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಚಿಂತನೆ ನಡೆದಿದೆ. ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆಗೆ ಕ್ಲಸ್ಟರ್‌ ನಿರ್ಮಾಣಕ್ಕಾಗಿ 10 ಸಾವಿರ ಕೋಟಿ ರು. ಹೂಡಿಕೆ ಮಾಡಲಾಗಿದೆ. ಚಿತ್ರದುರ್ಗದಲ್ಲಿ ದೂರವಾಣಿ ಉಪಕರಣಗಳ ಕ್ಲಸ್ಟರ್‌ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಮತ್ತೊಂದು ಕೈಗಾರಿಕಾ ನೀತಿ:  ರಾಜ್ಯದಲ್ಲಿ ಕೈಗಾರಿಕಾ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ 2019- 2024ನೇ ಸಾಲಿನ ಮತ್ತೊಂದು ಕೈಗಾರಿಕಾ ನೀತಿಯನ್ನು ಸರ್ಕಾರವು ಪ್ರಕಟಿಸಲಿದೆ. ಕೈಗಾರಿಕೆ ಅಭಿವೃದ್ಧಿಗೆ ಅಗತ್ಯ ಪ್ರೋತ್ಸಾಹಗಳನ್ನು ನೀಡುವುದು ಸೇರಿದಂತೆ ಹಲವು ರೀತಿಯ ನೆರವು ನೀಡಲಾಗುತ್ತದೆ. ಉದ್ಯೋಗ ಸೃಷ್ಟಿ, ಗುಣಮಟ್ಟದ ಉತ್ಪಾದನೆ ಮತ್ತು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಸುಧಾಕರ್‌ ಎಸ್‌. ಶೆಟ್ಟಿ, ಎಸೇನ್‌ ಇಂಡೋ ಬಿಸಿನೆಸ್‌ ಕೌನ್ಸಿಲ್‌ ಅಧ್ಯಕ್ಷ ಡಾಟೊ ರಮೇಶ್‌ ಕೊಡಮ್ಮಾಲ್‌ ಉಪಸ್ಥಿತರಿದ್ದರು.