ನವದೆಹಲಿ(ಡಿ.08): ಒಂದು ವೇಳೆ ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದಾದರೆ ಸರ್ಕಾರವನ್ನು ಉರುಳಿಸುವುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಾಮಮಂದಿರ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಜನವರಿಗೆ ಕಾಯ್ದಿರಿಸಿದೆ. ನಾವು ನ್ಯಾಯಾಲಯದಲ್ಲಿ ಕೇವಲ ಎರಡು ವಾರಗಳಲ್ಲಿ ಈ ಹೋರಾಟವನ್ನು ಗೆಲ್ಲಲಿದ್ದೇವೆ ಎಂದು ಸುಬ್ರಮಣಿಯನ್ ಭರವಸೆ ವ್ಯಕ್ತಪಡಿಸಿದ್ದಾರೆ. 

ಸದ್ಯ ನಮ್ಮ ಶತ್ರು ಸುಪ್ರೀಂ ಕೋರ್ಟ್ ಅಲ್ಲ ಬದಲಿಗೆ ಉತ್ತರಪ್ರದೇಶ ಮತ್ತು ಕೇಂದ್ರ ಸರ್ಕಾರಗಳೇ ನಮಮ ಶತ್ರುಗಳು. ಹೀಗಾಗಿ ಒಂದು ವೇಳೆ ರಾಮ ಮಂದಿರಕ್ಕೆ ಅಡ್ಡಿಯುಂಟು ಮಾಡಿದರೆ, ಈ ಎರಡು ಸರ್ಕಾರಗಳನ್ನು ನಾನೇ ಖುದ್ದಾಗಿ ಬೀಳಿಸುತ್ತೇನೆ ಎಂದು ಸ್ವಾಮಿ ಗುಡುಗಿದ್ದಾರೆ.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮುಸ್ಲಿಮರಿಗೆ ಯಾವುದೇ  ಆಕ್ಷೇಪಗಳಿಲ್ಲ ಎಂದು ನಾನು ಬಲ್ಲೆ ಎಂದಿರುವ ಸ್ವಾಮಿ, ನಾನು ವೈಯಕ್ತಿಕವಾಗಿ ಮುಸ್ಲಿಮರನ್ನು ಭೇಟಿಯಾಗಿದ್ದು ಅವರೇ ನನಗೆ ಈ ಮಾತುಗಳನ್ನು ಹೇಳಿದ್ದಾರೆ’ ಎಂದು ಸ್ವಾಮಿ ಹೇಳಿದ್ದಾರೆ.