ಶಿವಮೊಗ್ಗ (ಅ.08): ವಿಟಿಯು ಮರು ಮೌಲ್ಯಮಾಪನ ಕುರಿ ತಂತೆ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟ ವಾಡುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ, ಎಬಿವಿಪಿ ನೇತೃತ್ವದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಬಾರಿಯ ಮೌಲ್ಯಮಾಪನದಲ್ಲಿ ಭಾರಿ ವ್ಯತ್ಯಾಸವಾಗಿದೆ. ಶೇ.50ರಷ್ಟುವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಮರು ಮೌಲ್ಯಮಾಪನದ ನಂತರ ಹಲ ವರು ಪಾಸಾಗಿದ್ದಾರೆ. ವಿಶ್ವವಿದ್ಯಾ ಲಯ ವಿದ್ಯಾರ್ಥಿಗಳಿಂದ ಹಣ ಸುಲಿಗೆಯ ನಾಟಕವಾಡುತ್ತಿದೆ ಎಂಬುದು ಎರಡೂ ಸಂಘ ಟನೆಗಳ ಆಕ್ಷೇಪ. ನಗರದ ಜವಾ ಹರಲಾಲ್‌ ನೆಹರೂ ಕಾಲೇಜಿನ ಪ್ರಾಂಗಣ ದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಎನ್‌ಎಸ್‌ಯುಐ ಪ್ರತಿಭಟನೆ: ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯ) ಆಡಳಿತ ವೈಫಲ್ಯದಿಂದಾಗಿ ಪದೇ ಪದೇ ಸುದ್ದಿಯಾಗುತ್ತಿದ್ದು, ಇಲ್ಲಿನ ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಅನುಭವಿಸುವಂತಾಗಿದೆ. ವಿಟಿಯುನಿಂದ ಪ್ರತಿವರ್ಷ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯಾ ರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುತ್ತಿ ದ್ದಾರೆ. ಆದರೆ, ವಿವಿಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿ, ಅವರಿಂದ ಮರು ಮೌಲ್ಯಮಾಪನ ಶುಲ್ಕ, ಪರೀಕ್ಷಾ ಶುಲ್ಕ ಹೆಸರಿನಲ್ಲಿ ಕೋಟ್ಯಂತರ ರು.ಗಳ ಹಗಲು ದರೋಡೆಗೆ ಇಳಿದಿದೆ ಎನ್ನುವುದು ವಿವಿಯ ನಡವಳಿಕೆಯಿಂದ ಸಾಬೀತಾಗುತ್ತಿದೆ ಎಂದು ದೂರಿದರು.

ಈ ಬಾರಿ ಪರೀಕ್ಷೆಗೆ ಕುಳಿತಿದ್ದ ನಾಲ್ಕು ಲಕ್ಷ ವಿದ್ಯಾರ್ಥಿಗಳ ಪೈಕಿ, ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದ ನಂತರ ಪ್ರತಿ ವಿಷಯಕ್ಕೆ 10-20 ಅಂಕಗಳು ಹೆಚ್ಚು ಲಭಿಸಿವೆ. ಕೆಲವರಿಗೆ 50ರಷ್ಟುಅಂಕಗಳು ಹೆಚ್ಚು ಲಭಿ ಸಿವೆ. ಇದೇ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಫೋಟೋ ಪ್ರತಿ ಪಡೆದು ತಜ್ಞರಲ್ಲಿ ಮೌಲ್ಯಮಾಪನ ಮಾಡಿಸಿದಾಗ ವಿವಿ ನೀಡಿದ ಫಲಿತಾಂಶಕ್ಕಿಂತ ಹೆಚ್ಚು ಅಂಕಗಳು ಬರುವುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ರಾಜ್ಯಪಾಲರು ವಿಟಿಯು ಆಡಳಿತವನ್ನು ನೇರವಾಗಿ ತಮ್ಮ ಸುಪರ್ದಿಗೆ ವಹಿಸಿಕೊಂಡಿದ್ದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ಇಂತಹ ಘಟನೆಗೆ ವಿವಿಯಲ್ಲಿರುವ ಭ್ರಷ್ಟತಿಮಿಂ ಗಲಗಳೇ ಕಾರಣ. ಈ ಪ್ರಕರಣದಲ್ಲೂ ವಿವಿಯಲ್ಲಿರುವ ಕೆಲವು ಕೈಗಳ ದುಡ್ಡಿನ ದುರಾಸೆ ಕೈವಾಡ ಹೆಚ್ಚಾಗಿರುವುದು ಸಾಬೀತಾಗುತ್ತಿದೆ. ಕೂಡಲೇ ರಾಜ್ಯ ಪಾಲರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದ ತನಿಖೆಗೆ ಒಳ ಪಡಿಸಬೇಕು. ಈ ಘಟನೆಗೆ ಕಾರಣರಾದ ಅಧಿಕಾರಿಗಳನ್ನು, ವಿವಿಯ ಮುಖ್ಯಸ್ಥರನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರ ಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಶ್ರೀಜಿತ್‌, ರಾಜ್ಯ ಕಾರ‍್ಯದರ್ಶಿ ಚೇತ ನ್‌, ನಗರಾಧ್ಯಕ್ಷ ಬಾಲಾಜಿ, ಮಾಜಿ ರಾಜ್ಯ ಕಾರ್ಯದರ್ಶಿ ಸಿ.ಜೆ. ಮಧು ಸೂದನ್‌, ಪ್ರಮೋದ್‌ ಮೊದಲಾದವರಿದ್ದರು.

ಎಬಿವಿಪಿ ಪ್ರತಿಭಟನೆ: ಮೌಲ್ಯಮಾಪನ ಹಾಗೂ ಮರು ಮೌಲ್ಯಮಾಪನದಲ್ಲಿನ ಲೋಪ ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ವಿಟಿಯು ವ್ಯಾಪ್ತಿಯಲ್ಲಿ ಸುಮಾರು 210 ಇಂಜಿನಿ ಯರಿಂಗ್‌ ಕಾಲೇಜುಗಳಿವೆ. 4 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ ದ್ಧಾರೆ. ಪ್ರಸಕ್ತ ವರ್ಷದ ಪರೀಕ್ಷೆಯ ಫಲಿತಾಂಶ ಆಗಸ್ಟ್‌ ನಲ್ಲಿ ಪ್ರಕಟಗೊಂಡಿತ್ತು. ಆದರೆ ಫಲಿತಾಂಶದಲ್ಲಿ ಬಹಳ ವ್ಯತ್ಯಾಸ ಕಂಡು ಬಂದಿತ್ತು. ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಆದರೆ ಮೊದಲ ಫಲಿತಾಂಶಕ್ಕೂ ಈಗಿನ ಫಲಿತಾಂಶಕ್ಕೂ ಭಾರೀ ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿದರು.

ಇದನ್ನು ನೋಡಿದರೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹೇಗಾಗಿದೆ ಮತ್ತು ಮರು ಮೌಲ್ಯಮಾಪನ ಕೂಡ ಆಗಿ ದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಸಾವಿರಾರು ವಿದ್ಯಾರ್ಥಿ ಗಳಿಗೆ ಇದರಿಂದ ಅನ್ಯಾಯವಾಗಿದ್ದು, ಇದು ಗೊಂದಲದ ಗೂಡಾಗಿದೆ. ಮೌಲ್ಯ ಮಾಪನದಲ್ಲಿ ಆಗಿರುವ ಲೋಪದೋಷ ತಕ್ಷಣವೇ ಸರಿಪಡಿಸಬೇಕು. ವಿದ್ಯಾರ್ಥಿ ಗಳ ಹಿತ ಕಾಯಬೇಕು. ಮುಂದೆ ಈಗಾಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಎಬಿವಿಪಿ ನಗರ ಕಾರ್ಯದರ್ಶಿ ಎನ್‌.ಅಭಿಷೇಕ್‌, ಪ್ರಮುಖರಾದ ಶರತ್‌, ಸಚಿನ್‌ ರಾಯ್ಕ ರ್‌, ಮನೋಜ್‌, ವಿಜಯ ಕುಮಾರ್‌, ಶಬರೀಶ್‌ ಇನ್ನೂ ಹಲವರಿದ್ದರು.

(ಕನ್ನಡಪ್ರಭ ವಾರ್ತೆ)