ಹಳಿಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ, ಎಂಬಿಎ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಎದೆದೊಡ್ಡಿ ನಿಂತು ಅದನ್ನು ನಿಲ್ಲಿಸಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ಶ್ರವಣ್‌ ಪ್ರೇಮ್‌ ತಿವಾರಿ ಎಂಬ ಈ ಯುವಕನ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈ: ಹಳಿಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ, ಎಂಬಿಎ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಎದೆದೊಡ್ಡಿ ನಿಂತು ಅದನ್ನು ನಿಲ್ಲಿಸಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ಶ್ರವಣ್‌ ಪ್ರೇಮ್‌ ತಿವಾರಿ ಎಂಬ ಈ ಯುವಕನ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆ ಶ್ರವಣ್‌, ಚಾರ್ಣಿ ರೋಡ್‌ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ. ಈ ವೇಳೆ ವ್ಯಕ್ತಿಯೊಬ್ಬ ಹಳಿಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿತ್ತು. ಹತ್ತಿರ ಹೋಗಿ ನೋಡಿದಾಗ ಆತ ಇನ್ನೂ ಉಸಿರಾಡುತ್ತಿದ್ದ. ಇದೇ ಹೊತ್ತಿನಲ್ಲಿ ಅದೇ ಹಳಿಯ ಮೇಲೆ ರೈಲೊಂದು ಸಂಚಾರ ಆರಂಭಿಸಿತ್ತು. ಹೀಗಾಗಿ ಬೇರೆಯವರ ಸಹಾಯ ಪಡೆದು, ರೋಗಿಯನ್ನು ರಕ್ಷಿಸುವಷ್ಟುಸಮಯ ಶ್ರವಣ್‌ಗೆ ಇರಲಿಲ್ಲ.

ಬೇರೆ ದಾರಿ ಕಾಣದ ಆತ, ರೈಲಿನ ಚಾಲಕನ ಗಮನ ಸೆಳೆಯುವ ನಿಟ್ಟಿನಲ್ಲಿ ರೈಲು ಬರುತ್ತಿದ್ದ ಹಳಿಯ ಮೇಲೆ ನಿಂತು ಕೈ ಬೀಸುತ್ತಾ, ರೈಲು ನಿಲ್ಲಿಸುವಂತೆ ಸನ್ನೆ ಮಾಡಿದ್ದಾನೆ. ಅದೃಷ್ಟವಶಾತ್‌, ಶ್ರವಣ್‌ನನ್ನು ಗುರುತಿಸಿದ ರೈಲಿನ ಚಾಲಕ ರೈಲನ್ನು ನಿಲ್ಲಿಸಿದ್ದು, ಬಳಿಕ ರೋಗಿಯನ್ನು ರಕ್ಷಿಸಲಾಗಿದೆ.