ಮಹಾರಾಣಿ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರು ಇಲ್ಲದ ವೇಳೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.

ಬೆಂಗಳೂರು: ಮಹಾರಾಣಿ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಶೃತಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶೃತಿ ಕೆ.ಆರ್.ವೃತ್ತದ ಸಮೀಪ ಇರುವ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ.ವ್ಯಾಸಂಗ ಮಾಡುತ್ತಿದ್ದರು. ಊರಿಗೆ ಓಡಾಡಲು ಕಷ್ಟವೆಂದು ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. 

ವರಮಹಾಲಕ್ಷ್ಮೀ ನಿಮಿತ್ತ ರಜೆ ಇದ್ದ ಕಾರಣ ಶೃತಿ ಕೊಠಡಿಯಲ್ಲಿದ್ದ ಸ್ನೇಹಿತೆಯರು ತನ್ನ ಮನೆಗೆ ಹೋಗಿದ್ದರು. ಯಾರು ಇಲ್ಲದ ವೇಳೆ ಶನಿವಾರ ರಾತ್ರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ಬೆಳಗ್ಗೆ 9 ಗಂಟೆಯಾದರೂ ಶೃತಿ ಕೊಠಡಿಯಿಂದ ಹೊರ ಬಂದಿಲ್ಲ.

ವಾರ್ಡನ್ ಬಂದು ಕೊಠಡಿಯ ಬಾಗಿಲು ತಟ್ಟಿದ್ದು, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಹಾಸ್ಟೆಲ್ ವಾರ್ಡನ್ ಇತರ ಸಿಬ್ಬಂದಿಯನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಠಡಿಯಲ್ಲಿ ಯುವತಿಗೆ ಸೇರಿದ ಮೊಬೈಲ್ ಪತ್ತೆಯಾಗಿದ್ದು, ‘ನನ್ನ ಪೋಷಕರು ಒಳ್ಳೆಯವರು. ನನ್ನ ಆತ್ಮಹತ್ಯೆಗೆ ಗ್ಗೆ ಅವರನ್ನು ಪ್ರಶ್ನಿಸಬೇಡಿ’ ಎಂದು ಮೊಬೈಲ್‌ನಲ್ಲಿ ಟೈಪ್ ಮಾಡಿ ಇಟ್ಟಿರುವುದು ಲಭ್ಯವಾಗಿದೆ. 

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತ ಶೃತಿಯ ಸ್ನೇಹಿತರು ಹಾಗೂ ಕಾಲೇಜು ಶಿಕ್ಷಕರನ್ನು ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.