ಬೆಂಗಳೂರು [ಸೆ.09]:  ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಸರ್ಕಾರದ ಕ್ರಮ ತಪ್ಪು ಅಲ್ಲ. ದುಬಾರಿ ದಂಡದಿಂದ ಜನರಲ್ಲಿ ಭಯ ಮೂಡುತ್ತದೆ. ಹೀಗಾಗಿ ಇಂತಹ ಕಠಿಣ ನಿಯಮಗಳಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಪುದುಚೆರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವುದು ತಪ್ಪಲ್ಲ. ನಾನು ಐಪಿಎಸ್‌ ಅಧಿಕಾರಿಯಾಗಿದ್ದಾಗ ಪ್ರಧಾನಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಅವರನ್ನೂ ಬಿಟ್ಟಿರಲಿಲ್ಲ. ಅವರು ಕೂಡ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಕೂಡ ಪಾವತಿಸಿದ್ದರು. ತಾವು ಮಾಡಿದ ತಪ್ಪಿನ ಅರಿವು ಅವರಿಗೆ ಇತ್ತು. ಹೀಗಾಗಿ ಸಂಚಾರಿ ನಿಯಮ ಉಲ್ಲಂಘನೆ ದಂಡ ವಿಧಿಸುವುದು ತಪ್ಪಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದುಬಾರಿ ದಂಡ ವಿಧಿಸುವ ಕಠಿಣ ನಿಯಮಗಳಿಂದ ಬದಲಾವಣೆ ಉಂಟಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಲಕ್ಷಾಂತರ ರು. ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಕಠಿಣ ನಿಯಮ ಜಾರಿಗೆ ಬಂದಿದೆ. ಹೀಗಾಗಿ ನಿಯಮ ಉಲ್ಲಂಘಿಸಿದರೆ ದಂಡ ಬೀಳುತ್ತದೆ. ಇಂತಹ ಕಾನೂನು ಅನುಷ್ಠಾನದ ಕೆಲಸಕ್ಕೆ ಬೆಂಗಳೂರಿನಲ್ಲಿ ನಾನೇ ಸೇವೆ ಮಾಡಬೇಕೆಂದಿಲ್ಲ. ಬೆಂಗಳೂರಿನಲ್ಲಿ ನನಗಿಂತ ಉತ್ತಮ ಅಧಿಕಾರಿಗಳಾಗಿದ್ದಾರೆ. ಐಟಿ-ಬಿಟಿಯಿಂದಾಗಿ ಪ್ರಪಂಚದ ಭೂಪಟದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಒಳ್ಳೆಯ ನಗರ ಇದು. ಇಲ್ಲಿನ ಜನರು ಸಂಚಾರಿ ನಿಯಮಗಳಿಗೆ ಬೆಲೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.