ನವದೆಹಲಿ(ನ. 12): ಕೇಂದ್ರ ಸರಕಾರದ ಕರೆನ್ಸಿ ಹಿಂತೆಗೆತದ ಕ್ರಮ ಘೋಷಣೆಯಾದ ಬಳಿಕ ಸಾಕಷ್ಟು ಅಚ್ಚರಿಯ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರಾಹುಲ್ ಗಾಂಧಿ ಎಟಿಎಂನಲ್ಲಿ ಕ್ಯೂ ನಿಂತುಕೊಂಡಿದ್ದು, ಉತ್ತರ ಪ್ರದೇಶದಲ್ಲಿ ನೋಟಿನ ಕಂತೆಗಳನ್ನು ಸುಟ್ಟುಹಾಕಿದ್ದು, ಇತ್ಯಾದಿ ಸುದ್ದಿಗಳು ಬಂದಿವೆ. ಇಂಥವಲ್ಲಿ ಕೆಲವು ಫೇಕ್ ಆಗಿದ್ದರೆ ಕೆಲವು ವಾಸ್ತವಕ್ಕೆ ಕನ್ನಡಿ ಹಿಡಿಯುವಂಥವಾಗಿವೆ. ಈ ನಡುವೆ ದಿಲ್ಲಿಯ ಕೋಟ್ಯಾಧಿಪತಿಯೊಬ್ಬ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಚಿಲ್ಲರೆ ಹಣಕ್ಕಾಗಿ ಭಿಕ್ಷುಕರ ಎಡೆತಾಕಿದ ಪ್ರಸಂಗವೊಂದು ಭಾರೀ ವೈರಲ್ ಆಗಿದೆ. ನ್ಯೂಸ್18 ವೆಬ್'ಸೈಟ್'ನಲ್ಲಿ ಪ್ರಕಟವಾದ ಆ ಸುದ್ದಿ ಕಾಲ್ಪನಿಕವೋ, ಸತ್ಯ ಘಟನೆಯೋ ಗೊತ್ತಿಲ್ಲ. ಆದರೆ ಅದರ ವಿವರ ಇಲ್ಲಿದೆ.

"ದಿಲ್ಲಿಯ ಕೋಟ್ಯಧಿಪತಿಯೊಬ್ಬ ಬೆಂಗಳೂರಿನಲ್ಲಿ ಫ್ಯಾಕ್ಟರಿ ಹೊಂದಿರುತ್ತಾರೆ. ಆದರೆ, ಅದರ ಲೀಸ್ ಅವಧಿ ಮುಕ್ತಾಯವಾಗಿದ್ದು ಬೇರೆ ಕಂಪನಿಗೆ ಅದನ್ನು ಮಾರಲಾಗಿತ್ತು. ಈ ಅವಧಿಯಲ್ಲಿ ಫ್ಯಾಕ್ಟರಿಯ ಕಾರ್ಮಿಕರಿಗೆ 90 ಸಾವಿರ ರೂಪಾಯಿ ಕೂಲಿ ಹಣವನ್ನು ಇನ್ನೆರಡು ದಿನಗಳಲ್ಲಿ ನೀಡುವ ಹೊಣೆ ಈ ವ್ಯಕ್ತಿಯ ಮೇಲಿರುತ್ತದೆ. ಆಗಲೇ ನರೇಂದ್ರ ಮೋದಿಯವರು 500 ಮತ್ತು 2000 ರೂ ಮುಖಬೆಲೆಯ ಕರೆನ್ಸಿಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಘೋಷಿಸುತ್ತಾರೆ.

ಕೂಲಿಯವರಿಗೆ ಕ್ಯಾಷ್'ನಲ್ಲೇ ಹಣ ನೀಡಬೇಕು. ಕೋಟ್ಯಧಿಪತಿಯ ಅಕೌಂಟ್'ನಲ್ಲಿ ಕೋಟಿ ಕೋಟಿ ಹಣವಿದ್ದರೂ ಕ್ಯಾಷ್ ಇದ್ದದ್ದು ಕೆಲವೇ ನೂರುಗಳು ಮಾತ್ರ. ದಿಲ್ಲಿಯಿಂದ ಕ್ರೆಡಿಟ್ ಕಾರ್ಡ್ ಮೂಲಕ ಫ್ಲೈಟ್'ಗೆ ಟಿಕೆಟ್ ಬುಕ್ ಮಾಡಿ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಬಂದ ಬಳಿಕ ಅವರ ಫ್ಯಾಕ್ಟರಿಗೆ ತಲುಪಲು ಮಾರ್ಗವಿಲ್ಲದಂತಾಗುತ್ತದೆ. ಕ್ಯಾಬ್'ಗೆ ಕೊಡಲು ಕ್ಯಾಷ್ ಇರುವುದಿಲ್ಲ. ಹೀಗಾಗಿ, ಬಹುತೇಕ ನಡೆದುಕೊಂಡೇ ಇವರು ಫ್ಯಾಕ್ಟರಿ ತಲುಪುತ್ತಾರೆ. ಇನ್ನು, 90 ಸಾವಿರ ಕ್ಯಾಷ್ ಹೊಂಚಲು ಇವರು ಹರಸಾಹಸ ಮಾಡುತ್ತಾರೆ. ತಮ್ಮ ಸಿರಿವಂತ ಗೆಳೆಯರ ಬಳಿ ಒಂಚೂರು ನಗದು ಸಿಗುವುದಿಲ್ಲ. ಆಗ ಅವರು ಪೊಲೀಸ್ ಇಲಾಖೆಯಲ್ಲಿರುವ ತನ್ನ ಸ್ನೇಹಿತನೊಬ್ಬನ ಸಹಾಯ ಯಾಚಿಸುತ್ತಾರೆ. ಆಗ ಅವರಿಗೆ ಭಿಕ್ಷುಕರನ್ನು ಕೇಳುವ ಐಡಿಯಾ ಸಿಗುತ್ತದೆ. ವಿವಿಧ ಮೂಲಗಳಿಂದ ಲಕ್ಷಾಂತರ ಮೌಲ್ಯದ ಹಳೆಯ ನೋಟುಗಳನ್ನು ಸಂಗ್ರಹಿಸುತ್ತಾರೆ. ಆ ಪೊಲೀಸ್ ಆಫೀಸರ್'ನ ಸಹಾಯದಿಂದ ಮೆಜೆಸ್ಟಿಕ್ ಸುತ್ತಮುತ್ತಲಿನ ಭಿಕ್ಷುಕರನ್ನು ನೇರವಾಗಿ ಸಂಪರ್ಕಿಸುತ್ತಾರೆ. ಆದರೆ, ಸಾಕಷ್ಟು ಕಾಡಿಬೇಡಿದ ಬಳಿಕ ಭಿಕ್ಷುಕರು ತಮ್ಮ ಬಳಿ ಇರುವ ನೋಟುಗಳನ್ನು ದುಬಾರಿ ಬೆಲೆಗೆ ಕೊಡಲು ಸಮ್ಮತಿಸುತ್ತಾರೆ. 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳಿರುವ ಸುಮಾರು 2.5 ಲಕ್ಷ ರೂಪಾಯಿ ಕೊಟ್ಟು ಭಿಕ್ಷುಕರಿಂದ 100, 50, 20, 10 ರೂ ಮುಖಬೆಲೆಯ 90 ಸಾವಿರ ಮೌಲ್ಯದ ನೋಟುಗಳನ್ನು ಪಡೆಯುತ್ತಾರೆ."

ಅಂದಹಾಗೆ ಇದು ಅಂತೆಕಂತೆಯ ಸುದ್ದಿ ಎನ್ನುವುದು ಬಹುತೇಕ ಖಚಿತ. ಕೋಟಿ ಕೋಟಿ ಹಣ ಹೊಂದಿದ ಸಾಹುಕಾರ ಏಕದಮ್ ಭಿಕ್ಷುಕನಾಗಬೇಕಾದ ಪರಿಸ್ಥಿತಿ ರಾತ್ರೋರಾತ್ರಿ ಬಂದರೂ ಬರಬಹುದು ಎಂದು ಹೇಳಲು ಹೊರಟ ಕಥೆ ಇದು. ಸತ್ಯ ಘಟನೆಯಲ್ಲ.. ಅಂತೆಕಂತೆಗಳ ನಡುವೆ ಒಂದು ಮಾರಲ್ ಸ್ಟೋರಿ.