ತೂತ್ತುಕುಡಿಯ ಮಾಲಿನ್ಯಕಾರಕ ಘಟಕ ಮುಚ್ಚಲು ಆದೇಶ

Sterlite Copper Plant Shutdown: Tamil Nadu government orders
Highlights

ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂಬ ಕಾರಣಕ್ಕೆ ಭಾರೀ ವಿವಾದಕ್ಕೆ ತುತ್ತಾಗಿದ್ದ ತೂತ್ತುಕುಡಿಯ ಸ್ಟರ್ಲೈಟ್‌ ತಾಮ್ರದ ಘಟಕವನ್ನು ಮುಚ್ಚಲು ತಮಿಳುನಾಡು ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ, ತೂತ್ತುಕುಡಿ ಜಿಲ್ಲಾಡಳಿತ ಸ್ಥಾವರದ ಆವರಣಕ್ಕೆ ತೆರಳಿ ತಾಮ್ರ ಕರಗಿಸುವ ಘಟಕದ ಆವರಣಕ್ಕೆ ಬೀಗ ಜಡಿದಿದೆ. 

ಚೆನ್ನೈ: ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂಬ ಕಾರಣಕ್ಕೆ ಭಾರೀ ವಿವಾದಕ್ಕೆ ತುತ್ತಾಗಿದ್ದ ತೂತ್ತುಕುಡಿಯ ಸ್ಟರ್ಲೈಟ್‌ ತಾಮ್ರದ ಘಟಕವನ್ನು ಮುಚ್ಚಲು ತಮಿಳುನಾಡು ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ, ತೂತ್ತುಕುಡಿ ಜಿಲ್ಲಾಡಳಿತ ಸ್ಥಾವರದ ಆವರಣಕ್ಕೆ ತೆರಳಿ ತಾಮ್ರ ಕರಗಿಸುವ ಘಟಕದ ಆವರಣಕ್ಕೆ ಬೀಗ ಜಡಿದಿದೆ. ಅಲ್ಲದೆ, ಗಂಭೀರ ಪರಿಸರ ಮಾಲಿನ್ಯದ ಆಕ್ರೋಶಕ್ಕೆ ಗುರಿಯಾಗಿದ್ದ ಸ್ಥಾವರದ ಮುಖ್ಯದ್ವಾರಕ್ಕೆ ಸರ್ಕಾರಿ ಆದೇಶದ ಪ್ರತಿಯನ್ನು ಅಧಿಕಾರಿಗಳು ಲಗತ್ತಿಸಿದ್ದಾರೆ.

ರಾಜ್ಯ ವಿಧಾನಸಭಾ ಅಧಿವೇಶನ ಆರಂಭಕ್ಕೂ ಒಂದು ದಿನ ಮುನ್ನಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಂಗಳವಾರ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಸ್ಟರ್ಲೈಟ್‌ ಪ್ರಕರಣ ಉಲ್ಲೇಖಿಸಿ ಪ್ರತಿಪಕ್ಷಗಳು ಭಾರಿ ಗದ್ದಲ ಎಬ್ಬಿಸುವ ಸಾಧ್ಯತೆಯಿದೆ. ಈ ನಡುವೆ ಜನರ ಭಾವನೆಗಳಿಗೆ ಮನ್ನಣೆ ನೀಡಿ ಆದೇಶ ಜಾರಿಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.

ಭಾರೀ ಹಿಂಸೆ: ಘಟಕ ಮುಚ್ಚಲು ಆಗ್ರಹಿಸಿ ಕಳೆದ 3 ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆ 100ನೇ ದಿನವಾದ ಮೇ 22ರಂದು ಭಾರೀ ಹಿಂಸಾಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ಗೋಲಿಬಾರ್‌ ನಡೆಸಿದ ವೇಳೆ 13 ಜನ ಪ್ರತಿಭಟನಾಕಾರರು ಬಲಿಯಾಗಿದ್ದರು. ಪೊಲೀಸರ ಈ ವರ್ತನೆಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಘಟಕ ಮುಚ್ಚುವಂತೆ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಿತ್ತು.

ಈ ಹಿನ್ನೆಲೆಯಲ್ಲಿ ಘಟಕ ಮುಚ್ಚಲು ಸರ್ಕಾರ ಸಿದ್ಧತೆ ಆರಂಭಿಸಿತ್ತು. ಅದರ ಮೊದಲ ಭಾಗವಾಗಿ ಸ್ಥಾವರದ ಪರವಾನಗಿ ನವೀಕರಿಸಲು ಏ.19ರ ಆದೇಶದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕರಿಸಿತ್ತು. ಮೇ 23ರ ಆದೇಶದಲ್ಲಿ ಘಟಕ ಮುಚ್ಚುವಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಮೇ 24ರಂದು ಸ್ಥಾವರದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದೀಗ ಕೊನೆಯ ಹಂತವಾಗಿ ಘಟಕವನ್ನು ಶಾಶ್ವತವಾಗಿ ಮುಚ್ಚಲಾಗಿದೆ.

40000 ಜನರ ಉದ್ಯೋಗ ಸಂಕಷ್ಟದಲ್ಲಿ

ತೂತ್ತುಕುಡಿಯ ಸ್ಟರ್ಲೈಟ್‌ನ ತಾಮ್ರ ಘಟಕದಲ್ಲಿ 3500 ಜನ ನೇರವಾಗಿ ಉದ್ಯೋಗ ಹೊಂದಿದ್ದಾರೆ. ಈ ಪೈಕಿ 1000 ಜನ ಕಾಯಂ ಉದ್ಯೋಗಿಗಳಾಗಿದ್ದರೆ, 1500 ಜನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಪರೋಕ್ಷವಾಗಿ 35000-40000 ಜನ ಈ ಘಟಕದ ಮೂಲಕ ಉದ್ಯೋಗ ಪಡೆದುಕೊಂಡಿದ್ದರು. ಆದರೆ ಇದೀಗ ಘಟಕ ಮುಚ್ಚುತ್ತಿರುವ ಕಾರಣ ಇವರೆಲ್ಲಾ ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ.

loader