ನಗರದ ಕೇಂದ್ರ ಭಾಗದಲ್ಲಿರುವ ಪುರಭವನದ ಎದುರು ಪ್ರತಿಭಟನೆ ನಡೆಸಬೇಕೇ ಬೇಡವೇ ಎಂಬ ಚರ್ಚೆ ಕೆಲ ವರ್ಷಗಳಿಂದ ನಡೆಯುತ್ತಿದೆ. ಹೀಗೆ ಚರ್ಚೆ ನಡೆದಾಗಲೆಲ್ಲಾ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಾಮಾನ್ಯ. ಈ ಬಾರಿ ಟೌನ್‌ಹಾಲ್‌ ಬಳಿ ಪ್ರತಿಭಟನೆ ನಡೆಸುವುದನ್ನೇ ನಿಷೇಧಿಸಲು ಪಾಲಿಕೆ ಚಿಂತನೆ ನಡೆಸಿದೆ. ಈಗಲೂ ಪ್ರಗತಿಪರರಿಂದ ಪರ-ವಿರೋಧ ವ್ಯಕ್ತವಾಗುತ್ತಿದೆ.

ವರದಿ: ವೆಂ ಸುನೀಲ್‌ ಕುಮಾರ್‌, ಕನ್ನಡಪ್ರಭ

ಬೆಂಗಳೂರು: ಪ್ರತಿಭಟನೆ ಮೂಲಕ ಅಭಿವೃಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ವೇದಿಕೆಯಾಗುತ್ತಿದ್ದ, ಬೆಂಗಳೂರು ಮಹಾನಗರದ ಪ್ರತಿಷ್ಠಿತ ಕಟ್ಟಡ ಹಾಗೂ ಪ್ರತಿಭಟನಾಕಾರರ ಪರಮ ತಾಣ ಪುಟ್ಟಣ್ಣಚೆಟ್ಟಿಪುರಭವನ ಇನ್ನುಮುಂದೆ ಪ್ರತಿಭಟನೆಗಳಿಗೆ ವೇದಿಕೆ ಆಗಲಾರದು! ಕಾರಣ, ಈ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಕಸ್ತೂರಾ ಬಾ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಸ್ಥಳದಲ್ಲಿ ಪ್ರತಿಭಟಿಸುವುದನ್ನು ನಗರ ಪೋಲೀಸರು ನಿಷೇಧಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಬಿಬಿಎಂಪಿ ಈಗ ಪುರಭವನವನ್ನೂ ನಿಷೇಧಿತ ಪ್ರದೇಶವಾಗಿಸುತ್ತಿದೆ. ಈ ಬಗ್ಗೆ ಬಿಬಿಎಂಪಿ ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಭದ್ರೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿಭಟನೆಗಳಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪ್ರತಿಭಟನೆಗಳಿಗೆ ಅವಕಾಶ ನೀಡದಂತೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸ್ವಾತಂತ್ರ್ಯ ಉದ್ಯಾನ ಬಿಟ್ಟರೆ ಬೇರೆ ಜಾಗವೂ ಇಲ್ಲ. ದಾರಿಯೂ ಇಲ್ಲದಂತಾಗಿದೆ. ಆದರೆ ಇದಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಯಾರು ಏನು ಹೇಳುತ್ತಾರೆ?: ಈಗಾಗಲೇ ಬೆಂಗ​ಳೂರು ಟ್ರಾಫಿಕ್‌ನಲ್ಲಿ ಮುಳುಗಿ ಹೋಗಿದ್ದು, ಟೌನ್‌​​ಹಾಲ್‌ ಮುಂದೆಯೂ ಪ್ರತಿಭಟನೆಗಳನ್ನು ನಿಷೇಧಿ​ಸ​​ಬೇಕು ಎಂಬ ಕೂಗು ಕೇಳಿಬಂದ ಹಿನ್ನೆಲೆ​ಯಲ್ಲಿ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಇದು ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಷಣಮಾತ್ರದಲ್ಲಿ ಸಹಸ್ರಾರು ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗಿರುವ ಬೆಂಗಳೂರುರು ಹೃದಯ ಭಾಗದಲ್ಲಿರುವ ಟೌನ್‌ಹಾಲ್‌ ಮುಂಭಾಗದಲ್ಲಿ ತಮಗಾದ ಅನ್ಯಾಯವನ್ನು ಪ್ರತಿಭಟಿಸಲು, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವಾರು ಸಂಘಟನೆಗಳು ಧರಣಿ, ಸತ್ಯಾಗ್ರಹ ಮತ್ತು ಪ್ರತಿಭಟನೆಗಳಿಗೆ ಮುಂದಾಗುತ್ತವೆ. ಪ್ರತಿಭಟನೆ ನಡೆಸುವುದರಿಂದ ಟೌನ್‌ಹಾಲ್‌ ಮುಂಭಾಗ​ದಲ್ಲಿ ಸಂಚಾರ ದಟ್ಟಣೆ ದುಪ್ಪಟ್ಟು​ಗೊಳ್ಳುತ್ತಿದ್ದು, ಟೌನ್‌ಹಾಲ್‌ನ ಸೌಂದರ್ಯಕ್ಕೂ ಧಕ್ಕೆ ಬರುತ್ತಿದೆ ಎಂಬ ಕಾರಣವೊಡ್ಡಿ ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸಲು ಬಿಬಿಎಂಪಿ ಮುಂದಾಗಿದೆ. ಹಿಂದಿನಿಂದಲೂ ಕೆಲ ಸಂಘ-ಸಂಸ್ಥೆಗಳು, ಸಂಚಾರ ತಜ್ಞರು ಸೇರಿ ವಿವಿಧ ನಾಗರಿಕ ಸಂಸ್ಥೆಗಳ ಮುಖಂಡರಿಂದ ಟೌನ್‌ಹಾಲ್‌ ಮುಂದೆ ಪ್ರತಿಭಟನೆಗೆ ಅವಕಾಶ ನೀಡಬಾರದೆಂಬ ಕೂಗು ಕೇಳಿಬರುತ್ತಲೇ ಇದ್ದು, ಅದಕ್ಕೆ ಪ್ರಗತಿಪರ ಸಂಘಟನೆಗಳಿಂದ ಪ್ರತಿರೋಧವೂ ವ್ಯಕ್ತವಾಗುತ್ತಿದೆ.

ಪ್ರತಿಭಟನೆ ನಡೆಸುವ ಮೊದಲು ಪೊಲೀಸರಿಂದ ಅನುಮತಿ ಪಡೆಯಲಾಗುತ್ತದೆ. ಮೊದಲೇ ಪೊಲೀ​ಸರಿಗೆ ಯಾವ ರೀತಿಯಲ್ಲಿ ಪ್ರತಿಭಟನೆ ನಡೆಸ​ಲಾ​ಗುತ್ತದೆ. ಎಷ್ಟುಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ನೀಡ​ಲಾಗುತ್ತದೆ. ಮಧ್ಯಮ ವರ್ಗದವರು, ವಿಕಲ​ಚೇತನರು, ಬೀದಿ ವ್ಯಾಪಾರಿಗಳು ಪ್ಯಾಲೇಸ್‌ ಗ್ರೌಂಡ್‌ಗೆ ಹೋಗಿ ಪ್ರತಿಭಟನೆ ನಡೆಸಲು ಸಾಧ್ಯ​ವಾಗು​ತ್ತದೆಯೇ. ಹೀಗಾಗಿ ಇಂತಹ ನಿರ್ಧಾರ ಖಂಡ​ನೀಯ ಎಂಬುದು ಪ್ರಗತಿಪರ ಸಂಘಟನೆಗಳ ಅಭಿಪ್ರಾಯ. 

ಟೌನ್‌'ಹಾಲ್‌ ಬಳಿ ಪ್ರತಿಭಟಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಯಾವುದೇ ದೂರುಗಳಿಲ್ಲ. ಯಾವುದೋ ನೆಪವಿಟ್ಟುಕೊಂಡು ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಇಂತಹ ನಿರ್ಧಾರಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರುವಂತಹವು.
- ಶ್ರೀಧರ್‌ ಪಬ್ಬಿಶೆಟ್ಟಿ, 'ನಮ್ಮ ಬೆಂಗಳೂರು ಫೌಂಡೇಷನ್‌' ಸಿಇಒ

ಮತ್ತೊಬ್ಬರಿಗೆ ಸಮಸ್ಯೆಯಾಗದ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಹಾಗೇ ದಾಸರಹಳ್ಳಿಗೆ ಹೋಗಿ ಪ್ರತಿಭಟನೆ ಮಾಡಿದರೆ ಯಾರಿಗೆ ತಿಳಿಯುತ್ತದೆ? ನಗರ ಭಾಗದಲ್ಲಿ ನಡೆಯುವುದರಿಂದ ರಾಜಕಾರಣಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ರವಾನೆಯಾಗುತ್ತದೆ.
- ರೇವತಿ ಅಶೋಕ್‌, ಬಿ-ಪ್ಯಾಕ್‌ ಸಿಇಒ

ಟೌನ್‌'ಹಾಲ್‌ ಮುಂಭಾಗದಲ್ಲಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆ ನಡೆಯುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ. ಬಿಬಿಎಂಪಿ ನಿಷೇಧಿಸುವ ಬದಲು ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸದಂತೆ ಸೂಚನೆ ನೀಡಲಿ.
- ವಿ ಅಶ್ವಿನಿ, ಟ್ರಾಫಿಕ್‌ ಎಂಜಿನಿಯರ್‌

ಟೌನ್‌'ಹಾಲ್‌ ಮುಂದೆ ಪ್ರತಿಭಟನೆ ನಡೆಸುವುದರಿಂದ ಜೆಸಿ ರಸ್ತೆ, ಮಾರುಕಟ್ಟೆಭಾಗದಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಿರ್ಧಾರ ಸ್ವಾಗತಾರ್ಹ. ಜನರಿಗೆ ತೊಂದರೆ ನೀಡಲು ಯಾರಿಗೂ ಅಧಿಕಾರವಿಲ್ಲ. 
- ಪ್ರೊ| ಶ್ರೀಹರಿ, ಸಂಚಾರ ತಜ್ಞರು

ಈ ಹಿಂದೆ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯದಂತೆ ಮಾಡಿದರು. ಈಗ ಬಿಬಿಎಂಪಿ ಟೌನ್‌ಹಾಲ್‌ ಮುಂದೆ ಇಲ್ಲದ ನೆಪಗಳನ್ನು ಹೇಳಿ ಪ್ರತಿಭಟನೆಗಳನ್ನು ನಿಷೇಧಿಸಲು ಮುಂದಾಗಿರುವುದು ಖಂಡನೀಯ.
- ವೈ. ಮರಿಸ್ವಾಮಿ ಸಾಮಾಜಿಕ ಪರಿವರ್ತನಾ ಜನಾಂದೋಲನ ಮುಖಂಡ

ಟೌನ್‌ಹಾಲ್‌ ಎದುರು ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತಿಭಟನೆಗಳು ನಡೆದಿವೆ. ಹೋರಾಟಗಾರರ ದನಿ ಹತ್ತಿಕ್ಕುವ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. ಪ್ರತಿಭಟನೆಗಳಿಗೆ ಹಿನ್ನಡೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಖಂಡಿಸುತ್ತೇವೆ.
- ಚಿಕ್ಕರಾಜು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ

(epaper.kannadaprabha.in)