Asianet Suvarna News Asianet Suvarna News

ಮತ್ತೆ ಮಠಗಳ ನಿಯಂತ್ರಣ ವಿವಾದದಲ್ಲಿ ರಾಜ್ಯ ಸರ್ಕಾರ

ರಾಜ್ಯದ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಾಲಯಗಳ ಮೇಲೆ ಹತೋಟಿ ಸಾಧಿಸಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಭಾರಿ ವಿವಾದ ಹುಟ್ಟುಹಾಕಿದ್ದು, ಪ್ರತಿಪಕ್ಷಗಳು, ಮಠಾಧೀಶರು ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

State Govt Mutt Conflict

ಬೆಂಗಳೂರು : ರಾಜ್ಯದ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಾಲಯಗಳ ಮೇಲೆ ಹತೋಟಿ ಸಾಧಿಸಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಭಾರಿ ವಿವಾದ ಹುಟ್ಟುಹಾಕಿದ್ದು, ಪ್ರತಿಪಕ್ಷಗಳು, ಮಠಾಧೀಶರು ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ತನಗೆ ಮಠಗಳನ್ನು ಹತೋಟಿಗೆ ಪಡೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಬಗೆಗೆ ಈ ಹಿಂದೆಯೂ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರ ಈ ಬಾರಿ ಜ.29ರಂದು ಮಠ ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಂಬಂಧ ಸುತ್ತೋಲೆ ಹೊರಡಿಸಿದೆ.

ಈ ಸುತ್ತೋಲೆಗೆ ಬುಧವಾರ ಪ್ರತಿಪಕ್ಷಗಳು ಹಾಗೂ ಮಠಾಧಿಪತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಮಠಗಳನ್ನು ಹತೋಟಿಗೆ ತೆಗೆದುಕೊಳ್ಳಲು ಇಂತಹ ಕ್ರಮ ಕೈಗೊಂಡಿದೆ. ಹಿಂದು ಮಠ ಹಾಗೂ ದೇವಾಲಯಗಳನ್ನು ಗುರಿ ಮಾಡಿಕೊಂಡು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಈ ಸುತ್ತೋಲೆಯನ್ನು ಮುಜರಾಯಿ ಇಲಾಖೆ ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಎಚ್ಚರಿಕೆ ನೀಡಿದರು. ಮಾಜಿ ಸಚಿವರೂ ಆಗಿರುವ ಶಾಸಕ ಸಿ.ಟಿ.ರವಿ ಅವರು ಸುತ್ತೋಲೆಯ ಪ್ರತಿಯನ್ನು ಬಹಿರಂಗವಾಗಿಯೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಮಠ ಅಥವಾ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು.

ಮುಜರಾಯಿ ಆಯುಕ್ತರ ಸುತ್ತೋಲೆ:  ಜ.29ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರ ಕಚೇರಿಯು, ಇಲಾಖೆಯ ಸುಗಮ ಆಡಳಿತ ದೃಷ್ಟಿಯಿಂದ ನೂತನ ಕಾಯ್ದೆಯ ಕರಡು ರಚಿಸಲು ಸಮಿತಿ ರಚಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮ 1997, ತಿದ್ದುಪಡಿ ಕಾಯ್ದೆ 2011 ಹಾಗೂ 2012, ತಿದ್ದುಪಡಿ ನಿಯಮ 2012ರ ಅಡಿಯಲ್ಲಿ ಕೆಲವು ಬದಲಾವಣೆ, ಸೇರ್ಪಡೆ, ಹೊರತುಪಡಿಸಿ ಉತ್ತಮವಾದ ಕರಡು ಕಾಯ್ದೆ ರಚಿಸಬೇಕಾಗಿದೆ. ಹೀಗಾಗಿ ಸಾರ್ವಜನಿಕರು, ಅರ್ಚಕರು, ದೇವಸ್ಥಾನದ ಆಡಳಿತ ವರ್ಗ, ಸಿಬ್ಬಂದಿ ವರ್ಗ, ರಾಜ್ಯದ ಧರ್ಮಗುರು, ಮಠಾಧೀಶರು, ಉತ್ತರಾಧಿಕಾರಿಗಳು ಹಾಗೂ ಆಸಕ್ತರು ಮಠಗಳನ್ನು ಕಾಯ್ದೆ ವ್ಯಾಪ್ತಿಗೆ ತರಬೇಕೇ, ತಂದರೆ ಯಾವ ಪ್ರಮಾಣದಲ್ಲಿ ತರಬೇಕು ಎಂಬ ಬಗ್ಗೆ ಸಲಹೆ ನೀಡಬೇಕು ಎಂದು ಕೋರಿತ್ತು. ಆಸಕ್ತರು ತಮ್ಮ ಸಲಹೆಗಳನ್ನು 15 ದಿನಗಳ ಒಳಗಾಗಿ ನೀಡಬೇಕು. ಇದರ ಆಧಾರದ ಮೇಲೆ ಕಾಯ್ದೆಯ ಕರಡು ಅಂತಿಮಗೊಳಿಸುವುದಾಗಿ ಹೇಳಲಾಗಿತ್ತು.

ಈ ಪ್ರಕಟಣೆಯಲ್ಲಿ ಧಾರ್ಮಿಕ ಸಂಸ್ಥೆಗಳನ್ನು ಒಳಪಡಿಸಬೇಕೇ, ಬೇಡವೇ ಹಾಗೂ ಒಳಪಡಿಸುವುದಾದರೆ ಯಾವ ರೀತಿ, ಎಷ್ಟರ ಮಟ್ಟಿಗೆ ಒಳಪಡಿಸಬೇಕು ಎಂಬ ಪ್ರಶ್ನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪ್ರಶ್ನೆಯ ಉದ್ದೇಶ ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯುವುದೇ ಆಗಿದೆ ಎಂಬ ಕಾರಣಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

ಮಠಗಳ ವಶದ ಉದ್ದೇಶವೇ ಇಲ್ಲ:  ಸದನದ ಒಳಗೆ ಹಾಗೂ ಹೊರಗೆ ತೀವ್ರ ವಿವಾದ ಭುಗಿಲೆದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿ ಸುದ್ದಿಗೋಷ್ಠಿ ನಡೆಸಿದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಅದಮಾರು ಮಠದ ಪ್ರಕರಣದಲ್ಲಿ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಧಾರ್ಮಿಕ ಪರಿಷತ್‌ನ ವಿಶೇಷ ಸಮಿತಿ ಸಲಹೆ ಪಡೆದು ಸುತ್ತೋಲೆ ಹೊರಡಿಸಿದ್ದೇವೆ. ಇದು ಧಾರ್ಮಿಕ ದತ್ತಿ ಇಲಾಖೆಯ ಕರಡು ಕಾಯ್ದೆ ತಿದ್ದುಪಡಿ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹವೇ ಹೊರತು ಬೇರೇನೂ ಅಲ್ಲ. ನಾವು ಯಾವುದೇ ಮಠ, ದೇವಾಲಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕೋರ್ಟ್‌ 2006ರಲ್ಲಿ ನಿರ್ದೇಶನ ನೀಡಿ ಧಾರ್ಮಿಕ ಇಲಾಖೆಗೆ ಕರಡು ಸಿದ್ಧಪಡಿಸುವಂತೆ ನಿರ್ದೇಶನ ನೀಡಿತ್ತು. ಈಗ ಧಾರ್ಮಿಕ ಪರಿಷತ್‌ನಲ್ಲಿ ಚರ್ಚೆ ಮಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ. ಇದರ ಪ್ರಕ್ರಿಯೆಯಾಗಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಣೆ ಹೊರಡಿಸಿದ್ದೇವೆಯೇ ಹೊರತು ಮಠ, ಮಾನ್ಯಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ಯಾವುದೇ ಉದ್ದೇಶ ನಮಗೆ ಇಲ್ಲ.

ಮುಜರಾಯಿ ಇಲಾಖೆಯಲ್ಲಿ ಈಗಾಗಲೇ 34,599 ದೇವಸ್ಥಾನಗಳಿವೆ. ಅವುಗಳನ್ನು ನೋಡಿಕೊಳ್ಳುವುದೇ ನಮಗೆ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಠಗಳನ್ನೂ ನಮ್ಮ ಸುಪರ್ದಿಗೆ ತೆಗೆದುಕೊಂಡು ಏನು ಮಾಡಬೇಕು? ಹೀಗಾಗಿ ಮಠಗಳಿಗೆ ಅಂತಹ ಯಾವುದೇ ಭಯ ಬೇಡ ಎಂದು ಹೇಳಿದರು.

ಜನರಿಗೆ ತಪ್ಪು ಮಾಹಿತಿ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಆಡಳಿತಾವಧಿ ಒಂದೂವರೆ ತಿಂಗಳು ಮಾತ್ರ ಇರುತ್ತದೆ. ಇಂತಹ ವೇಳೆಯಲ್ಲಿ ಅದರಲ್ಲೂ ಚುನಾವಣೆ ಸಮಯದಲ್ಲಿ ಇಂತಹ ವಿವಾದ ಮೈಮೇಲೆ ಎಳೆದುಕೊಳ್ಳುವ ದಡ್ಡರು ನಾವಲ್ಲ. ಇದನ್ನು ವಿನಾಕಾರಣ ಸೃಷ್ಟಿಮಾಡಿ ಪ್ರಚೋದಿಸಲಾಗುತ್ತಿದೆ ಎಂದು ವಿಪಕ್ಷಗಳನ್ನು ದೂರಿದರು.

ಉಡುಪಿಯ ಪೇಜಾವರ ಶ್ರೀಗಳು, ಕೃಷ್ಣಮಠ ಎರಡೂ ಬೆಂಕಿ ಇದ್ದಂತೆ. ಅದಕ್ಕೆ ನಾವು ಕೈ ಹಾಕುವ ಪ್ರಯತ್ನ ಮಾಡುವುದಿಲ್ಲ. ತಾವು ಯಾವ ಪಕ್ಷಕ್ಕೆ ಮತ ಹಾಕುತ್ತೇವೆ ಎಂಬುದನ್ನು ನೇರವಾಗಿ ಹೇಳುವ ಸ್ವಾಮೀಜಿ ಅವರು, ತುಂಬಾ ಬುದ್ಧಿವಂತರು. ನಾವು ಅವರ ಬಗ್ಗೆ ಏನೂ ಹೇಳುವುದಿಲ್ಲ.

- ರುದ್ರಪ್ಪ ಲಮಾಣಿ, ಮುಜರಾಯಿ ಸಚಿವ

ಸುತ್ತೋಲೆಯಲ್ಲಿ ಏನಿತ್ತು?

ಧಾರ್ಮಿಕ ದತ್ತಿ ಇಲಾಖೆಯ ಸುಗಮ ಆಡಳಿತ ದೃಷ್ಟಿಯಿಂದ ಹೊಸ ಕಾಯ್ದೆಯ ಕರಡು ರಚಿಸಲಾಗುತ್ತಿದೆ. ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನ, ಧಾರ್ಮಿಕ ಸಂಸ್ಥೆಗಳನ್ನು ಹಾಗೂ ಯಾವುದೇ ಹಿಂದೂ ಧಾರ್ಮಿಕ ಪಂಗಡದ ಧಾರ್ಮಿಕ ಸಂಸ್ಥೆಯನ್ನು ಅಥವಾ ಧರ್ಮಾದಾಯ ದತ್ತಿಗಳನ್ನು ಧಾರ್ಮಿಕ ದತ್ತಿ ಕಾಯ್ದೆಯ ವ್ಯಾಪ್ತಿಗೆ ಒಳಡಪಡಿಸಬೇಕೇ ಅಥವಾ ಬೇಡವೇ, ಒಳಪಡಿಸುವುದಾದರೆ ಯಾವ ರೀತಿಯಾಗಿ ಮತ್ತು ಎಷ್ಟರ ಮಟ್ಟಿಗೆ ಒಳಪಡಿಸಬೇಕು? ಈ ಬಗ್ಗೆ 15 ದಿನಗಳ ಒಳಗಾಗಿ ಜನರು, ಮಠಾಧೀಶರು ಅಭಿಪ್ರಾಯ ಸಲ್ಲಿಸಬೇಕು.

ರಾಜ್ಯ ಸರ್ಕಾರ ಉಡುಪಿ ಕೃಷ್ಣ ಮಠವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ನಾನು ಮಠವನ್ನು ತ್ಯಜಿಸುತ್ತೇನೆ. ಮಠ ಸರ್ಕಾರೀಕರಣಗೊಂಡರೆ ಆಗ ನಾನು ಸರ್ಕಾರ ಸೇವಕನಾಗಿ, ನೌಕರನಾಗಿ ಇರಲು ಸಾಧ್ಯವಿಲ್ಲ. ನಾನು ಮಠವನ್ನು ಬಿಟ್ಟು, ಜನರೊಂದಿಗೆ ಸಮಾಜವನ್ನು ಅವಲಂಬಿತನಾಗಿ ಇದ್ದು ಬಿಡುತ್ತೇನೆ. ಇದು ನನ್ನ ಸಂಕಲ್ಪ. ರಾಜ್ಯ ಸರ್ಕಾರದ ನಡೆಯ ವಿರುದ್ಧ ನಾನು ಯಾವುದೇ ಹೋರಾಟ ನಡೆಸುವುದಿಲ್ಲ, ಎಲ್ಲವನ್ನೂ ಜನರಿಗೆ ಬಿಟ್ಟಿದ್ದೇನೆ, ಜನರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ರಾಜ್ಯ ಸರ್ಕಾರ ಮಠಗಳನ್ನು ಸ್ವಾಧೀನ ಮಾಡುವುದಕ್ಕೆ ಹೊರಟು ಸ್ವತಃ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವನ್ನು ಕೊಟ್ಟಿದೆ. ಹಿಂದೂಗಳ ಮಠಗಳನ್ನು ಸ್ವಾಧೀನಪಡಿಸುವುದಕ್ಕೆ ಹೊರಟಿರುವುದರಿಂದ ಈ ಸರ್ಕಾರ ತಾನು ಹಿಂದೂ ವಿರೋಧಿ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದೆ.

ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಸರ್ಕಾರ ಮಠಮಾನ್ಯಗಳಿಗೆ ನಿಯಂತ್ರಣ ಹೇರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಅಂತಹದೊಂದು ಕ್ರಮ ಕೈಗೊಂಡಿದ್ದೇ ಆದರೆ, ಅದಕ್ಕೆ ನಮ್ಮ ವಿರೋಧ ಇದ್ದೇ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಧಾರ್ಮಿಕ ಸಂಗತಿ ಎಂಬುದು ವ್ಯಕ್ತಿಗತ ವಿಚಾರ. ಇದು ಖಾಸಗಿಯಾಗಿದ್ದರೇ ಚೆನ್ನ. ಧರ್ಮಕ್ಕೆ ರಾಜಕೀಯ ಸೋಂಕು ಇರಬಾರದು.

- ಡಾ ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

ಬೀದಿಗಿಳಿದು ಹೋರಾಟ: ಬಿಜೆಪಿ ಎಚ್ಚರಿಕೆ : ಮಠಗಳನ್ನು ನಿಯಂತ್ರಣಕ್ಕೆ ತರುವ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯು ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಕ್ಕೆ ಹೊರಡಿಸಿರುವ ಪ್ರಕಟಣೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಮುಜರಾಯಿ ಇಲಾಖೆ ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನೂ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಮಠಗಳನ್ನು ನಿಯಂತ್ರಣಕ್ಕೆ ಪಡೆಯುವ ಸರ್ಕಾರದ ಕ್ರಮ ಹಿಂದೂ ಮಠಾಧೀಶರಲ್ಲಿ ಆತಂಕ ತಂದಿದೆ. ಎಲ್ಲಾ ಮಠಾಧೀಶರು, ಭಕ್ತಾದಿಗಳು ಬೀದಿಗೆ ಬೀಳುವ ಸಾಧ್ಯತೆ ಇದೆ. ಸರ್ಕಾರಕ್ಕೆ ಒಳ್ಳೆಯ ಉದ್ದೇಶವಿದ್ದರೆ ಹಿಂದೂ, ಮುಸ್ಲಿಂ, ಕ್ರೈಸ್ತ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ದತ್ತಿ ವ್ಯಾಪ್ತಿಗೆ ತರಬೇಕು ಎಂದು ಕಿಡಿಕಾರಿದರು.

ಉಪನಾಯಕ ಆರ್‌.ಅಶೋಕ್‌ ಮಾತನಾಡಿ, ರಾಜ್ಯ ಸರ್ಕಾರದ ಕೆಟ್ಟದೃಷ್ಟಿಯು ಹಿಂದೂ ದೇವಾಲಯ ಹಾಗೂ ಮಠಗಳ ಮೇಲೆ ಬಿದ್ದಿದೆ. ಅನ್ನ, ವಿದ್ಯೆ, ವಸತಿ ಹೀಗೆ ತ್ರಿವಿಧ ದಾಸೋಹಗಳನ್ನು ನಡೆಸುತ್ತಿರುವ ಮಠಗಳನ್ನು ಸರ್ಕಾರ ನಿಯಂತ್ರಿಸಲು ಮುಂದಾಗಿರುವುದು ದುರದೃಷ್ಟಕರ ಸಂಗತಿ. ದುರಾಲೋಚನೆ, ದುಷ್ಟಬುದ್ಧಿಯಿಂದಾಗಿ ಮಠಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ಮುಂದಾಗಿದೆ. ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯಿಂದ ಸರ್ಕಾರ ಹಿಂದೂ ವಿರೋಧಿ ಎಂಬುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಹಿಂದೂ ಮಠಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಬೇರೆ ಧರ್ಮದ ಮಠಗಳನ್ನು ಏಕೆ ಈ ಸುತ್ತೊಲೆಯಲ್ಲಿ ಸೇರಿಸಿಲ್ಲ? ಧರ್ಮ ಒಡೆಯುವ ಷಡ್ಯಂತ್ರ ಇದಾಗಿದೆ ಎಂದು ದೂರಿದರು. ಶಾಸಕ ಸಿ.ಟಿ.ರವಿ ಮಾತನಾಡಿ, ಜಾತಿ ಜಾತಿಗಳನ್ನು ಒಡೆಯುವ ಪ್ರಯತ್ನ ನಡೆಸಲಾಗಿದೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ನಂತರ ಸುತ್ತೋಲೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios