ಬೆಂಗಳೂರು :  ರೈತರು, ಬಡವರಿಂದ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಖಾಸಗಿ ಲೇವಾದೇವಿದಾರರಿಗೆ ಕಡಿವಾಣ ಹಾಕಲು ನಿರ್ಧರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾ ರ ಇದೀಗ ಚಿನ್ನಾಭರಣಗಳನ್ನು ಅಡಮಾನ ಇಟ್ಟುಕೊಂಡು ಸಾಲ ನೀಡುವ ಹಣಕಾಸು ಸಂಸ್ಥೆಗಳ ಮೇಲೂ ದೃಷ್ಟಿ ಹಾಯಿಸಿದೆ. 

ರಾಜ್ಯದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಚಿನ್ನಾಭರಣ ಗಳನ್ನು ಅಡಮಾನ ಇಟ್ಟುಕೊಂಡು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಕೇಳಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ತಿಳಿಸಿದ್ದಾರೆ.

"

ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳು ಹೆಚ್ಚು ಬಡ್ಡಿ ವಿಧಿಸುತ್ತಿವೆ ಎಂಬ ಬಗ್ಗೆ ರಾಜ್ಯದ ವಿವಿಧೆಡೆಯಿಂದ ದೂರುಗಳು ಬರುತ್ತಿವೆ. ನಾವೂ ಸಹ ಪತ್ರಿಕೆಗಳಲ್ಲಿ ಪುಟಗಟ್ಟಲೆ ಅಡಮಾನ ಇಟ್ಟ ಚಿನ್ನಾಭರಣಗಳ ಮುಟ್ಟುಗೋಲು ಜಾಹಿರಾತು ನೀಡುವುದನ್ನು ನೋಡಿದ್ದೇವೆ. ಹೀಗಾಗಿ ಕೆಲ ಎನ್‌ಬಿಎಫ್‌ಸಿ ಅವರ ಬಡ್ಡಿ ಹಾವಳಿ ಕಡಿಮೆ ಮಾಡಲೂ ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ‘ಕನ್ನಡಪ್ರಭಕ್ಕೆ’ ಮಾಹಿತಿ ನೀಡಿದರು. 

ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಬಡವರ ಮೇಲೆ ಆಗುತ್ತಿರುವ ಶೋಷಣೆ ತಪ್ಪಿಸಲು ಸುಗ್ರೀವಾಜ್ಞೆ ಮಾಡಿದ್ದೇವೆ. ಇದರ ಜತೆಗೆ ಹಲವು ಎನ್‌ಬಿಎಫ್‌ಸಿ ಹಣಕಾಸು ಸಂಸ್ಥೆಗಳು ಬಡವರಿಂದ ಚಿನ್ನಾಭರಣ ಅಡಮಾನ ಇಟ್ಟು ಸಾಲ ನೀಡುವುದು ಹಾಗೂ ಚರಾಸ್ಥಿ ಅಡಮಾನ ಇಟ್ಟುಕೊಂಡು ಸಾಲ ನೀಡುವುದು ಮಾಡುತ್ತಿವೆ. ಆದರೆ, ಆರ್‌ಬಿಐ ನಿಯಮದ ಪ್ರಕಾರ ವಾರ್ಷಿಕ ಶೇ.12.5ರಿಂದ ಶೇ.15.5 ರವರೆಗೆ ಮಾತ್ರ ಬಡ್ಡಿ ಪಡೆಯಲು ಅವಕಾಶವಿದೆ. ಕೆಲವು ಎನ್‌ಬಿಎಫ್‌ಸಿ ಕಂಪನಿಗಳು ಮಾಸಿಕ ಶೇ.3 ರವರೆಗೆ ಬಡ್ಡಿ ವಸೂಲಿ ಮಾಡುತ್ತಿವೆ. ವಾರ್ಷಿಕ ಶೇ.36ರಷ್ಟು ಬಡ್ಡಿ ದರ ವಿಧಿಸಲು ಇವರಿಗೆ ಯಾರೂ ಅವಕಾಶ ನೀಡಿಲ್ಲ. ನಾವು ಲೂಟಿಯನ್ನು ಪ್ರಶ್ನಿಸಿದರೆ ಎನ್‌ಬಿಎಫ್‌ಸಿಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ರಾಜ್ಯದ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದರೆ ರಾಜ್ಯ ಸರ್ಕಾರ ಸುಮ್ಮನೆ ಕೈಕಟ್ಟಿ ಕೂರಬೇಕು ಎಂದು ಯಾವ ನಿಯಮವೂ  ಹೇಳಿಲ್ಲ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

ಎನ್‌ಬಿಎಫ್‌ಸಿ ಮೇಲೆ ಕೇಸು: ಈ ಹಿಂದೆ ದಿನಪತ್ರಿಕೆಗಳಲ್ಲಿ ಪುಟಗಟ್ಟಲೆ ಚಿನ್ನಭಾರಣ ಮುಟ್ಟುಗೋಲು ಬಗ್ಗೆ ಒಂದು ಎನ್‌ಬಿಎಫ್‌ಸಿ ಕಂಪನಿ ಜಾಹೀರಾತು ನೀಡಿತ್ತು. ಇದರ ಆಧಾರದ ಮೇಲೆ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರು ಎನ್‌ಬಿಎಫ್‌ಸಿ ಮೇಲೆ ಕೇಸು ದಾಖಲಿಸಿದ್ದಾರೆ. ಆದರೆ, ಎನ್‌ಬಿಎಫ್‌ಸಿ ಅವರು ಎನ್‌ಬಿಎಫ್‌ಸಿ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಕೋರ್ಟ್‌ಗೆ ಹೋಗಿದ್ದಾರೆ. ಇಂತಹ ಕ್ರಮದಲ್ಲಿ ಗುಜರಾತ್ ಕೋರ್ಟ್ ಒಮ್ಮೆ ರಾಜ್ಯದ ಪರ ತೀರ್ಪು ನೀಡಿದೆ. 

ಮದ್ರಾಸ್ ಹೈಕೋರ್ಟ್ ಒಮ್ಮೆ ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಎನ್‌ಬಿಎಫ್‌ಸಿಗಳು ದುಬಾರಿ ಬಡ್ಡಿ ದರ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.