ಬೆಂಗಳೂರು (ಮಾ. 10):  ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳಿಗೆ ಅವಕಾಶವಾಗದಂತೆ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವೆಡೆ ಭದ್ರತೆ ಮತ್ತಷ್ಟುಬಿಗಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ರಾಜ್ಯದ ಎಲ್ಲಾ ಜಲಾಶಯಗಳು, ಪ್ರಮುಖ ಪ್ರವಾಸಿ ತಾಣಗಳು, ದೇವಾಲಯಗಳು, ಧಾರ್ಮಿಕ ಕೇಂದ್ರಗಳು, ಬಸ್‌, ರೈಲು, ವಿಮಾನ ನಿಲ್ದಾಣಗಳು, ಸೇನೆಯ ವಿವಿಧ ರಕ್ಷಣಾ ಹಾಗೂ ತರಬೇತಿ ಕೇಂದ್ರಗಳು, ದೊಡ್ಡ ದೊಡ್ಡ ಕೈಗಾರಿಕಗಳು, ನ್ಯೂಕ್ಲಿಯರ್‌ ಮತ್ತು ಥರ್ಮಲ್‌ ಘಟಕಗಳು, ಪ್ರಮುಖ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು, ಪಟ್ರೋಲಿಯಂ ಉತ್ಪನ್ನಗಳ ಸಂಸ್ಕರಣಾ ಘಟಕಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳು, ಜನನಿಬಿಡ ಪ್ರದೇಶಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಆದೇಶ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ದೇಶದ 40ಕ್ಕೂ ಹೆಚ್ಚು ಸೈನಿಕರು ಬಲಿಯಾದರು. ಇದಕ್ಕೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಪಾಕ್‌ ಉಗ್ರರ ಅಡಗುತಾಣಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಘೋಷಿಸಲಾಗಿದ್ದ ಹೈ ಅಲರ್ಟ್‌ ಮುಂದುವರೆಸಿದೆ.

ಭಾರತ ನಡೆಸಿದ ಪ್ರತೀಕಾರದ ದಾಳಿಯಿಂದಾಗಿ ಭಯೋತ್ಪಾದಕರು ದೇಶದಲ್ಲಿ ಮತ್ತಷ್ಟುವಿಧ್ವಂಸಕ ಕೃತ್ಯ ನಡೆಸಲು ಪ್ರಯತ್ನಿಸಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಭದ್ರತಾ ವ್ಯವಸ್ಥೆಯ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್‌ ಅವರ ನೇತೃತ್ವದಲ್ಲಿ ಮಾ.6ರಂದು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಅದರಂತೆ ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಓಆರ್‌) ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರುಗಳಿಗೆ ಪ್ರತಿ ಜಿಲ್ಲೆಯಲ್ಲೂ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಾದ ರಾಜ್ಯದ ಎಲ್ಲಾ ಪ್ರಮುಖ ಬಸ್ಸು, ರೈಲು, ವಿಮಾನ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು, ದೇವಾಲಯಗಳು, ಪ್ರವಾಸಿತಾಣಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳು, ಭಾರತೀಯ ಸೇನೆಯ ರಕ್ಷಣಾ ಮತ್ತು ತರಬೇತಿ ಕೇಂದ್ರಗಳು, ಜಲಾಶಯಗಳು, ನ್ಯೂಕ್ಲಿಯರ್‌ ಮತ್ತು ಥರ್ಮಲ್‌ ಘಟಕಗಳು, ಬೃಹತ್‌ ಕೈಗಾರಿಕೆಗಳು, ತೈಲೋತ್ಪನ್ನ ಸಂಸ್ಕರಣಾ ಘಟಕಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು, ಪ್ರಮುಖ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳಲ್ಲಿ ಪ್ರವೇಶ ನಿಯಂತ್ರಣ, ತಪಾಸಣಾ ಯಂತ್ರಗಳ ಅಳವಡಿಕೆ, ಸಮಾಜಘಾತುಕ ಹಾಗೂ ವಿಧ್ವಂಸಕ ಕೃತ್ಯಗಳನ್ನು ಪತ್ತೆ ಕಾರ್ಯತಂತ್ರಗಳು ಸೇರಿದಂತೆ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ, ಎಲ್ಲಾದರೂ ಲೋಪವಿದ್ದರೆ ಕೂಡಲೇ ಸರಿಪಡಿಸಬೇಕು. ತಮ್ಮ ವ್ಯಾಪ್ತಿಯ ಇನ್ನೂ ಯಾವುದೇ ಸೂಕ್ಷ್ಮ ಪ್ರದೇಶ, ಜನಿಬಿಡ ಪ್ರದೇಶಗಳಿದ್ದರೆ ಗುರುತಿಸಿ ಅಗತ್ಯ ಭದ್ರತೆ ಕೈಗೊಳ್ಳಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಡಿ.ಸಿ.ಗಳು ಮತ್ತು ಎಸ್‌.ಪಿ.ಗಳು ತಮ್ಮ ವ್ಯಾಪ್ತಿಯಲ್ಲಿ ಇನ್ನೂ ಯಾವುದಾದರೂ ಸ್ಥಳ, ಮೌಲ್ಯಯುತ ಪ್ರದೇಶಕ್ಕೆ ಭದ್ರತೆ ಕೈಗೊಳ್ಳುವ ಅಗತ್ಯ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಸ್ಥಳಗಳಲ್ಲಿ ವಿವಿಧ ಭದ್ರತಾ ಏಜೆನ್ಸಿಗಳು ಕೈಗೊಂಡಿರುವ ಆನ್‌ಸೈಟ್‌ ಮತ್ತು ಆಫ್‌ಸೈಟ್‌ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಸಿವಿಲ್‌ ಡಿಫೆನ್ಸ್‌, ಹೋಮ್‌ ಗಾರ್ಡ್ಸ್, ಎನ್‌ಸಿಸಿ ಸೇರಿದಂತೆ ಸಹಾಯಕ ಪಡೆಗಳು ಯಾವುದೇ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳು, ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗಳು ಸದಾ ಕಾರ್ಯನಿರ್ವಹಿಸುತ್ತಿರಬೇಕು. ಉಪಗ್ರಹ ಸೇರಿದಂತೆ ಎಲ್ಲಾ ಸಂವಹನ ಆಧಾರಿತ ಚಾನಲ್‌ಗಳು ಸದಾ ಕಾರ್ಯನಿರ್ವಹಣೆಯಲ್ಲಿರುವಂತೆ ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.