ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಚುನಾಯಿತ ಪ್ರತಿನಿಧಿಗಳ ಜತೆ ಗೌರವಯುತವಾಗಿ ನಡೆದುಕೊಳ್ಳುವಂತೆ ಬುಧವಾರ ಪೊಲೀಸರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು : ಇತ್ತೀಚೆಗೆ ಪೊಲೀಸರ ವರ್ಗಾವಣೆ ವಿಚಾರದಲ್ಲಿ ಮೈತ್ರಿ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಚುನಾಯಿತ ಪ್ರತಿನಿಧಿಗಳ ಜತೆ ಗೌರವಯುತವಾಗಿ ನಡೆದುಕೊಳ್ಳುವಂತೆ ಬುಧವಾರ ಪೊಲೀಸರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಜನರ ಕೆಲಸ ನಿರ್ವಹಿಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿದ್ದಾರೆ. ಹಾಗಾಗಿ ಅವರ ಸಲಹೆ ಮತ್ತು ಸೂಚನೆಗಳ ಪಾಲನೆಗೆ ಪ್ರಯತ್ನಿಸಬೇಕು ಎಂದು ಸ್ಪಷ್ಟವಾಗಿ ಡಿಜಿಪಿ ನೀಲಮಣಿ ಎನ್.ರಾಜು ಸೂಚಿಸಿದ್ದಾರೆ.
ಮೂರು ದಿನಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ 141 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿತ್ತು. ಆದರೆ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ನಮ್ಮ ಕ್ಷೇತ್ರಗಳಲ್ಲಿ ಪೊಲೀಸರು ಮಾತು ಕೇಳುತ್ತಿಲ್ಲ. ಜೆಡಿಎಸ್ ಪಕ್ಷದ ಮುಖಂಡರಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿದ್ದರು.
ಈ ಬೆಳವಣಿಗೆ ಬೆನ್ನೆಲ್ಲೇ ಡಿಜಿಪಿ ಅವರು ಚುನಾಯಿತ ಪ್ರತಿನಿಧಿಗಳ ಸೂಚನೆ ಪಾಲನೆಗೆ ಸುತ್ತೋಲೆ ಹೊರಡಿಸಿರುವುದು ಸಹಜವಾಗಿ ಗಮನ ಸೆಳೆದಿದೆ.
ಏನಿದು ಸುತ್ತೋಲೆ?
* ಜನರಿಂದ ಆಯ್ಕೆಯಾಗಿರುವ ಸಂಸದರು ಮತ್ತು ಶಾಸಕರ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳಿ.
* ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಕಾರ್ಯಗಳನ್ನು ನಿರ್ವಹಿಸಲು ಸಂವಿಧಾನಾತ್ಮಕ ಅಧಿಕಾರಿಗಳನ್ನು ಹೊಂದಿದ್ದಾರೆ. ಸಂಸದರು ಹಾಗೂ ಶಾಸಕರ ದೂರವಾಣಿ ಕರೆಗಳನ್ನು ಸ್ವೀಕರಿಸಬೇಕು. ಅವರ ಸಲಹೆ, ಸೂಚನೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಸಂಬಂಧ ನಿಯಮಾನುಸಾರ ನಡೆದುಕೊಳ್ಳಬೇಕು.
* ಸಲಹೆ, ಸೂಚನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದೆ ಹೋದರೆ ತಕ್ಷಣವೇ ಸಂಸದರು ಹಾಗೂ ಶಾಸಕರ ಗಮನಕ್ಕೆ ತರಬೇಕು.
* ಹಿರಿಯ ಪೊಲೀಸ್ ಅಧಿಕಾರಿಗಳು ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಲು ಮುಕ್ತ ಅವಕಾಶವಿದೆ. ಆಯಾ ಚುನಾಯಿತ ಪ್ರತಿನಿಧಿಗಳ ಜತೆ ಕ್ಷೇತ್ರದ ಕುಂದು ಕೊರತೆಗಳ ಕುರಿತು ಪೊಲೀಸರು ಚರ್ಚಿಸಬಹುದು.
