ಅಯ್ಯಪ್ಪ ದೇವರಿಗೆ ತೊಡಿಸಲಾಗುವ ಆಭರಣಗಳನ್ನು ಹೊತ್ತುಕೊಂಡು ಹೋಗುವ ‘ತಂಗ ಅಂಗಿ’ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ಈ ಘಟನೆ ನಡೆದಿದೆ.
ಶಬರಿಮಲೆ(ಡಿ.25): ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಉಂಟಾದ ಕಾಲ್ತುಳಿತದಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಆರ್.ಗಿರಿಜಾ ತಿಳಿಸಿದ್ದಾರೆ.
ಮಾಲಿಕಾಪುರಂ ಮತ್ತು ದೇಗುಲದ ಸನ್ನಿಧಾನಂ ನಡುವೆ ಸಣ್ಣ ಪ್ರಮಾಣದ ಕಾಲ್ತುಳಿತ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಗುಲದ ಆಸುಪಾಸಿನಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು. ಅಯ್ಯಪ್ಪ ದೇವರಿಗೆ ತೊಡಿಸಲಾಗುವ ಆಭರಣಗಳನ್ನು ಹೊತ್ತುಕೊಂಡು ಹೋಗುವ ‘ತಂಗ ಅಂಗಿ’ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ಈ ಘಟನೆ ನಡೆದಿದೆ. ಕೇರಳ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮಾತನಾಡಿ ದೇವರ ಆಭರಣಗಳನ್ನು ಕ್ಷೇತ್ರಕ್ಕೆ ತರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅದನ್ನು ನೋಡಲು ಆಗಮಿಸಿದರು ಎಂದರು.
ಸೋಮವಾರ ಮಂಡಲ ಪೂಜೆ ನಡೆಯಲಿದ್ದು, ಅದಕ್ಕಾಗಿ ಪಂಪಾ ನದಿ ತೀರದಲ್ಲಿರುವ ಆರಾನ್ಮೂಲದ ಪಾರ್ಥಸಾರಥಿ ದೇಗುಲದಿಂದ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮೆರವಣಿಗೆ ನಾಲ್ಕು ದಿನಗಳ ಮೊದಲೇ ಆರಂಭವಾಗುತ್ತದೆ.
