ಜೂ.21 ರಿಂದ 28ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

news | Thursday, June 14th, 2018
Suvarna Web Desk
Highlights

ಜೂ. 21 ರಿಂದ 28ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

673 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ

ಪರೀಕ್ಷೆ ಎದುರಿಸಲಿದ್ದಾರೆ 1,32,543 ಬಾಲಕರು ಮತ್ತು 73,370 ಬಾಲಕಿಯರು

ಜುಲೈ 8ರಿಂದ 14ರವರೆಗೆ ಮೌಲ್ಯಮಾಪನ ನಡೆಯಲಿದೆ

ಬೆಂಗಳೂರು(ಜೂ.14): 2018ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳನ್ನು ಜೂ.21 ರಿಂದ 28ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ರಾಜ್ಯದ 673 ಪರೀಕ್ಷಾ ಕೇಂದ್ರಗಳಲ್ಲಿ 2.07,913 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ 1,32,543 ಬಾಲಕರು ಮತ್ತು 73,370 ಬಾಲಕಿಯರು ಸೇರಿದ್ದಾರೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

604 ಸರ್ಕಾರಿ ಪರೀಕ್ಷಾ ಕೇಂದ್ರಗಳು ಮತ್ತು 69 ಖಾಸಗಿ ಪರೀಕ್ಷಾ ಕೇಂದ್ರಗಳಿವೆ. ಈ ಪೈಕಿ 645 ಸಮಾನ್ಯ, 17 ಸೂಕ್ಷ್ಮ ಮತ್ತು 11 ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿವೆ ಎಂದು ಮಂಡಳಿ ತಿಳಿಸಿದೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಒಟ್ಟು 673 ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತದಳ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಹಿಕಾರಿಗಳನ್ನು ಒಳಗೊಂಡ 612 ವಿಚಕ್ಷಣ ಜಾಗೃತದಳ ನೇಮಕ ಮಾಡಲಾಗುತ್ತದೆ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಪೂರಕ ಪರೀಕ್ಷೆ ಮುಗಿದ ಬಳಿಕ ರಾಜ್ಯದ 9 ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಜುಲೈ 8ರಿಂದ 14ರವರೆಗೆ ಮೌಲ್ಯಮಾಪನ ನಡೆಯಲಿದೆ. ಇದಕ್ಕಾಗಿ 18 ಸಾವಿರ ಮೌಲ್ಯಮಾಪಕರನ್ನು ನೇಮಿಸಲಾಗುತ್ತದೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ವಿ. ಸುಮಂಗಲಾ ಮಾಹಿತಿ ನೀಡಿದ್ದಾರೆ.

Comments 0
Add Comment