ಕೊಲಂಬೋ :  ಈಸ್ಟರ್‌ ಭಾನುವಾರದಂದು ಸರಣಿ ಸ್ಫೋಟ ನಡೆಸಿ 250ಕ್ಕೂ ಹೆಚ್ಚು ಅಮಾಯಕರನ್ನು ಬಲಿ ಪಡೆದ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಶ್ರೀಲಂಕಾ ಪೊಲೀಸರು ಶುಕ್ರವಾರ ತಡರಾತ್ರಿ ಕಾಲ್ಮುನೈ ಎಂಬ ನಗರದಲ್ಲಿ ಉಗ್ರರು ಅಡಗಿರುವ ಶಂಕೆಯಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ, ಪೊಲೀಸರಿಗೆ ಕೈಗೆ ಸಿಕ್ಕಿ ಬೀಳುವ ಭೀತಿಯಲ್ಲಿ ಮೂವರು ಆತ್ಮಾಹತ್ಯಾ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ರಾತ್ರಿಯಿಡೀ ಉಗ್ರರು ಮತ್ತು ಪೊಲೀಸರ ನಡುವೆ ನಡೆದ ಕಾರ್ಯಾಚರಣೆಯಲ್ಲಿ 6 ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ 12 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ಜೊತೆಗಿನ ಚಕಮಕಿಯಲ್ಲಿ ಇನ್ನೂ ಮೂವರು ಉಗ್ರರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಶೋಧ ವೇಳೆ ಚಕಮಕಿ: ಕಂಡು ಕೇಳರಿಯದ ಸರಣಿ ಆತ್ಮಾಹುತಿ ಬಾಂಬ್‌ ದಾಳಿಗೆ ಲಂಕಾ ತುತ್ತಾದ ಹಿನ್ನೆಲೆಯಲ್ಲಿ ಲಂಕಾದ ವಿಶೇಷ ಕಾರ್ಯಪಡೆ ಹಾಗೂ ಸೇನಾ ಪಡೆಗಳು ಉಗ್ರಗಾಮಿಗಳ ಬೇಟೆ ಆರಂಭಿಸಿದ್ದವು. ಒಂದು ವಾರದ ಹಿಂದೆ ಸಂಭವಿಸಿದ ಸ್ಫೋಟಕ್ಕೆ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯೇ ಕಾರಣ ಎಂಬುದು ಖಚಿತಪಟ್ಟಿರುವ ಹಿನ್ನೆಲೆಯಲ್ಲಿ ಅದರ ಕಾರ್ಯಕರ್ತರ ವಿರುದ್ಧ ತೀವ್ರ ಶೋಧ ನಡೆಸಲಾಗುತ್ತಿದೆ. ಅದರಂತೆ ಪೂರ್ವ ಶ್ರೀಲಂಕಾದ ಕಾಲ್ಮುನೈ ನಗರದ ಬಳಿ ಇರುವ, ರಾಜಧಾನಿ ಕೊಲಂಬೋದಿಂದ 360 ಕಿ.ಮೀ. ದೂರದ ಸೈಂತಮರುತು ಎಂಬಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಭದ್ರತಾ ಪಡೆಗಳಿಗೆ ಲಭ್ಯವಾಯಿತು.

ಶುಕ್ರವಾರ ರಾತ್ರಿ ಉಗ್ರರ ಅಡಗುತಾಣ ಪ್ರವೇಶಿಸಿದಾಗ ಪ್ರತಿರೋಧ ವ್ಯಕ್ತವಾಯಿತು. ಭದ್ರತಾ ಪಡೆಗಳ ಮೇಲೆಯೇ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಅಮಾಯಕ ಸಾರ್ವಜನಿಕರು ಸಿಲುಕಿದರು. ಕನಿಕರ ತೋರದೆ ಉಗ್ರರು ಸಿಡಿಸಿದ ಗುಂಡಿಗೆ 6 ಪುರುಷರು, 3 ಮಹಿಳೆಯರು ಹಾಗೂ 6 ಮಕ್ಕಳು ಸೇರಿದಂತೆ 15 ಮಂದಿ ಹತರಾದರು. ಮೃತರಲ್ಲಿ ಮೂವರು ಆತ್ಮಾಹುತಿ ಬಾಂಬರ್‌ಗಳೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಆತ್ಮಾಹುತಿ ಬಾಂಬ್‌ ದಾಳಿ ನಡೆಸಲು ಬಳಸಲಾಗುವ ಸ್ಫೋಟಕ, ಕಿಟ್‌, ಸೇನಾ ಸಮವಸ್ತ್ರ, ಐಸಿಸ್‌ ಧ್ವಜ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಬಳಿಕ ಮುಸ್ಲಿಂ ಬಾಹುಳ್ಯದ ಕಾಲ್ಮುನೈ, ಸೈಂತಮರುತು ಮತ್ತಿತರೆಡೆ ಕರ್ಫ್ಯೂ ಹೇರಲಾಗಿದೆ.