ಕೊಲಂಬೋ[ಏ.25]: ಭಾರತೀಯರು ಸೇರಿದಂತೆ ಒಟ್ಟು 359 ಅಮಾಯಕರನ್ನು ಬಲಿಪಡೆದ ಲಂಕಾ ಸರಣಿ ಸ್ಫೋಟದಲ್ಲಿ ಶ್ರೀಲಂಕಾದ ಮುಸ್ಲಿಂ ಸಮುದಾಯದ ಫೈರ್‌ಬ್ರಾಂಡ್‌ ಮೌಲ್ವಿ ಜೆಹ್ರಾನ್‌ ಹಶೀಮ್‌ ಮುಖ್ಯವಾದ ಪಾತ್ರ ನಿರ್ವಹಿಸಿದೆ ಎಂದು ಶ್ರೀಲಂಕಾದ ಗುಪ್ತಚರ ಇಲಾಖೆ ಪ್ರತಿಪಾದಿಸಿದೆ.

ಅಲ್ಲದೆ, ಈ ಹಿಂದೆಯೇ ಈ ದಾಳಿಯಲ್ಲಿ ಬಾಹ್ಯ ಭಯೋತ್ಪಾದಕರ ಬೆಂಬಲ ಪಡೆದು ಹಶೀಮ್‌ ನೇತೃತ್ವದ ನ್ಯಾಷನಲ್‌ ತೌಹೀತ್‌ ಜಮಾತ್‌ ಉಗ್ರ ಸಂಘಟನೆ ಈ ಕೃತ್ಯ ಎಸಗಿದೆ ಎಂದು ಲಂಕಾ ಹೇಳಿತ್ತು. ಈ ಮೂಲಕ ಈ ದಾಳಿಯಲ್ಲಿ ಹಶೀಮ್‌ ಕೈವಾಡವಿದೆ ಎಂಬುದನ್ನು ಪರೋಕ್ಷವಾಗಿ ಆರೋಪಿಸಲಾಗಿತ್ತು. ಲಂಕಾ ಸರಣಿ ಸ್ಫೋಟದ ಹೊಣೆ ಹೊತ್ತ ಬಳಿಕ ಐಸಿಸ್‌ ಉಗ್ರ ಸಂಘಟನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಜೆಹ್ರಾನ್‌ ಹಶೀಮ್‌ ರೀತಿಯೇ ಕಾಣುವ ವ್ಯಕ್ತಿ ಇದ್ದಾನೆ ಎಂದು ಹೇಳಲಾಗಿದೆ.

ಮೈತುಂಬಾ ಕಪ್ಪು ಬಣ್ಣದ ಬಟ್ಟೆತೊಟ್ಟಿರುವ, ತಲೆ ಮತ್ತು ಮುಖಕ್ಕೆ ಕಪ್ಪು ಬಣ್ಣದ ಸುತ್ತಿಕೊಂಡಿರುವ 8 ಉಗ್ರರು ತಾವು ಉಗ್ರ ಕೃತ್ಯ ಎಸಗುವುದಾಗಿ ಐಸಿಸ್‌ ಉಗ್ರ ಸಂಘಟನೆ ಮುಖ್ಯಸ್ಥ ಅಬುಬಕರ್‌ ಅಲ್‌ಬಗ್ದಾದಿ ಎದುರು ಪ್ರಮಾಣ ಮಾಡುತ್ತಾರೆ. ಈ ಪೈಕಿ ಓರ್ವ ಬಂದೂಕು ಹಿಡಿದುಕೊಂಡಿದ್ದು, ಅವನನ್ನು ಲಂಕಾದ ಮೌಲ್ವಿ ಜೆಹ್ರಾನ್‌ ಹಶೀಮ್‌ ಎಂದು ಗುರುತಿಸಲಾಗಿದೆ. ಉಳಿದ 7 ಉಗ್ರರು ಮುಖಕ್ಕೂ ಬಟ್ಟೆಕಟ್ಟಿಕೊಂಡಿರುವುದರಿಂದ ಅವರ ಗುರುತು ಪತ್ತೆ ಆಗಿಲ್ಲ.