ಮೊಳಕಾಲ್ಮುರು: ಆಪರೇಷನ್‌ ಕಮಲ ಕುರಿತು ನಮ್ಮ ಮೇಲೆ ಆರೋಪ ಮಾಡುವಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಹೊಸ ಫ್ಯಾಷನ್‌ ಆಗಿದೆ. ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲದೆ ಬೇರೆಯವರನ್ನು ಭಯಪಡಿಸಲು ಈ ರೀತಿಯಾಗಿ ಸೃಷ್ಟಿಸುವುದು ಅವರಿಗೆ ಸಾಮಾನ್ಯವಾಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು

ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಆಪರೇಷನ್‌ ಕಮಲ ಉದ್ಭವವಾಗಿತ್ತು. ಅದನ್ನೇ ಮಾನದಂಡವಾಗಿಸಿಕೊಂಡು ನಮ್ಮ ಮೇಲೆ ವೃತಾ ಆರೋಪಿಸುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಬೇಕು. ಮೈತ್ರಿ ಸರ್ಕಾರದ ನಾಯಕರೇ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದೆ, ಆಪರೇಷನ್‌ ಕಮಲ ಅಂತ ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನಮ್ಮ ಪಾರ್ಟಿಯ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಅವರ ಶಾಸಕರನ್ನು ಯಾವತ್ತು ನಾವು ಕರೆದಿಲ್ಲ. ರಾಜ್ಯ ಬರದಲ್ಲಿದೆ ಬರದ ಬಗ್ಗೆ ಗಮನ ಕೊಡದೆ ಆಪರೇಷನ್‌ ಕಮಲ ಅಂತ ಜನರನ್ನು ದಿಕ್ಕು ತಪ್ಪಿಸಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಜನರನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗಿ ಮಸಿ ಬಳಿಯುವ ಕೆಲಸ ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಬೇಕು. ಜೆಡಿಎಸ್‌ ಅಥವಾ ಕಾಂಗ್ರೆಸ್‌ ಶಾಸಕರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಯಾರನ್ನು ಕರೆದಿಲ್ಲ. ಕಾಂಗ್ರೆಸ್‌ನವರು ಜೆಡಿಎಸ್‌ ಪಕ್ಷಕ್ಕೆ ಸಿಎಂ ಸ್ಥಾನ ನೀಡಿದ್ದು ಕಾಂಗ್ರೆಸ್‌ ಶಾಸಕರು ತಳಮಳಿಸುವಂತಾಗಿದೆ. ಇದನ್ನು ಪ್ಯಾಚಪ್‌ ಮಾಡಲು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಷ್ಟುದಿನ ಶ್ರೀರಾಮುಲು, ಯಡಿಯೂರಪ್ಪ ಎನ್ನುತ್ತಿದ್ದ ಅವರು ಈಗ ನಮ್ಮ ಪಿಎಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.