ರಾಜ್ಯದಲ್ಲಿ ಅಂತರ್ಜಲ ಕುಸಿತದಿಂದ 44 ಲಕ್ಷ ತೆಂಗಿನ ಮರಗಳು ನಾಶವಾಗಿ ಸುಮಾರು 4,500 ಕೋಟಿ ರು.ಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ.
ವಿಧಾನಸಭೆ: ರಾಜ್ಯದಲ್ಲಿ ಅಂತರ್ಜಲ ಕುಸಿತದಿಂದ 44 ಲಕ್ಷ ತೆಂಗಿನ ಮರಗಳು ನಾಶವಾಗಿ ಸುಮಾರು 4,500 ಕೋಟಿ ರು.ಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಆದರೆ ಪ್ರತಿ ತೆಂಗಿನ ಮರಕ್ಕೆ 8 ಸಾವಿರ ರು. ಪರಿಹಾರ ಪ್ಯಾಕೇಜ್ ನೀಡಲು ಸಾಧ್ಯವಿಲ್ಲ. ಪ್ರತಿ ಹೆಕ್ಟೇರ್ ತೆಂಗಿಗೆ 50 ಸಾವಿರ ರು. ಹಾಗೂ ಅಡಿಕೆಗೆ 1.87 ಲಕ್ಷ ರು.ಗಳಂತೆ ಒಟ್ಟು 2,477 ಕೋಟಿ ರು. ಗಳ ವಿಶೇಷ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ವಿಧಾನಸಭೆಯಲ್ಲಿ ಬುಧವಾರ ಜೆಡಿಎಸ್ ಶಾಸಕ ಎಂ.ಕೆ. ಶಿವಲಿಂಗೇಗೌಡ ಮತ್ತಿತರರು ನೀಡಿದ್ದ ಸೂಚನೆ ಮೇರೆಗೆ ನಡೆದ ಚರ್ಚೆ ಬಳಿಕ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೀಡಿರುವ ಉತ್ತರವನ್ನು ಸದನದಲ್ಲಿ ಮಂಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ವಿಷಯ ತಿಳಿಸಿದರು.
ಕಡಲೆ ಖರೀದಿ ಷರತ್ತು ಸಡಿಲಿಕೆಗೆ ಪರಿಶೀಲನೆ: ರಾಜ್ಯದಲ್ಲಿ ಪ್ರತಿ ಕ್ವಿಂಟಲ್ ಗೆ 3,700 ರು. ದರದಲ್ಲಿ ಕಡಲೆ ಖರೀದಿಗಾಗಿ ಖರೀದಿ ಕೇಂದ್ರ ಆರಂಭಿಸಿರುವ ರಾಜ್ಯ ಸರ್ಕಾರ, ಖರೀದಿ ಮೇಲೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವ ಸಂಬಂಧ ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು. ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮತ್ತಿತರರ ಪ್ರಸ್ತಾಪಕ್ಕೆ ಅವರು ಉತ್ತರಿಸಿದರು.
