ಕಾರಿನ ಬಾಗಿಲುಗಳು ಬೋಯಿಂಗ್‌ ವಿಮಾನದ ಬಾಗಿಲಿನಷ್ಟೇ ಶಕ್ತಿಶಾಲಿಯಾಗಿರು­ತ್ತದೆ. ಒಳಗಡೆಯಿಂದ ಅಧ್ಯಕ್ಷರು ತೆಗೆಯಲೂ ಸಾಧ್ಯವಿರು­ವು­ದಿಲ್ಲ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ವಿದೇಶ ಸಂಚಾರಕ್ಕೆ ಏರ್ಫೋರ್ಸ್ 1 ಎಂಬ ಅತ್ಯಾಧುನಿಕ ಹಾರುವ ಅರಮನೆ ಖ್ಯಾತಿಯ ವಿಮಾನ ಇದ್ದಂತೆ, ರಸ್ತೆಯಲ್ಲಿ ಸಂಚರಿಸುವ ವೇಳೆ ಬಳಸಲು ವಿಶೇಷವಾಗಿ ನಿರ್ಮಿಸಲಾದ ಕಾರನ್ನು ಬಳಸಲಾಗುತ್ತದೆ. ಕ್ಯಾಡಿಲಾಕ್ ಎಂದು ಕರೆಯಲಾಗುವ ಈ ಕಾರು ವಿಶ್ವದಲ್ಲಿ ಎಲ್ಲೂ ಮಾರಾಟಕ್ಕೆ ಸಿಗದು. ಅಮೆರಿಕದ್ದೇ ಆದ ಜನರಲ್ ಮೋಟಾರ್ಸ್, ಅಧ್ಯಕ್ಷರಿಗೆಂದೇ ಈ ವಿಶೇಷ ಕಾರನ್ನು ಸಿದ್ಧಪಡಿಸುತ್ತದೆ. ಈ ಕಾರಿನ ಒಟ್ಟು ವೆಚ್ಚ ಅಂದಾಜು ರೂ.100 ಕೋಟಿ.
ಈ ಕಾರಲ್ಲಿ ಏನೇನಿದೆ ಗೊತ್ತಾ?: ತುರ್ತು ಬಳಕೆಗೆಂದು ಅಧ್ಯಕ್ಷರ ಗುಂಪಿನ ರಕ್ತದ ಬಾಟಲ್, ಅಶ್ರುವಾಯು ಶೆಲ್'ಗಳು, ಶಾಟ್'ಗನ್, ಗುಂಡಿನ ದಾಳಿ ಅಥವಾ ರಾಸಾಯನಿಕ ದಾಳಿ ತಡೆಯುವ ಬಾಗಿಲು ಮತ್ತು ಕಿಟಕಿ, ನೆಲಬಾಂಬ್ ದಾಳಿಯಿಂದ ಅಧ್ಯಕ್ಷರನ್ನು ರಕ್ಷಿಸಲು ಕಾರಿನ ಕೆಳಗೆ ವಿಶೇಷ ಸ್ಟೀಲ್ ಪ್ಲೇಟ್, ಆಮ್ಲಜನಕದ ಟ್ಯಾಂಕ್, ಮದ್ಯ, ಟೀವಿ, ಪೆಂಟಗನ್, ಉಪಾಧ್ಯಕ್ಷರ ಜೊತೆ ನೇರಫೋನ್ ಸಂಪರ್ಕದ ವ್ಯವಸ್ಥೆ ಸೇರಿ ಹಲವು ವ್ಯವಸ್ಥೆಗಳು ಕಾರಿನಲ್ಲಿ ಲಭ್ಯವಿರುತ್ತದೆ. ಕಾರಿನ ತೂಕ 8 ಟನ್. ಕಾರಿನ ಹೊರಮೈನಂತೆ ಅದರ ಟಯರ್'ಗಳು ಕೂಡಾ ಗುಂಡು ನಿರೋಧಕ. ಕಾರಿನ ಬಾಗಿಲುಗಳು ಬೋಯಿಂಗ್ ವಿಮಾನದ ಬಾಗಿಲಿನಷ್ಟೇ ಶಕ್ತಿಶಾಲಿಯಾಗಿರುತ್ತದೆ. ಒಳಗಡೆಯಿಂದ ಅಧ್ಯಕ್ಷರು ತೆಗೆಯಲೂ ಸಾಧ್ಯವಿರುವುದಿಲ್ಲ. ಈ ಹಿಂದೆ ಬರಾಕ್ ಒಬಾಮ ಕೂಡಾ ಇದೇ ರೀತಿಯ ಕಾರು ಬಳಸುತ್ತಿದ್ದರು. ಆದರೆ ಈ ಬಾರಿ ಹೊಸ ಕಾರನ್ನು ತಯಾರಿಸಲಾಗಿದೆ. ಇದರಲ್ಲಿ ಚಾಲಕ ಸೇರಿ 7 ಜನ ಕೂರಬಹುದು. ಪ್ರತಿ ಬಾರಿಯೂ ಇಂಥ 12 ಕಾರುಗಳನ್ನು ಶ್ವೇತಭವನ ಹೊಂದಿರುತ್ತದೆ. ಇದನ್ನು ವಿಶ್ವದ ವಿವಿಧೆಡೆ ಇರುವ ಆಯಕಟ್ಟಿನ ಕೇಂದ್ರಗಳಲ್ಲಿ ಇಟ್ಟುಕೊಳ್ಳುವ ಮೂಲಕ ಸದಾ ಅಧ್ಯಕ್ಷರ ರಕ್ಷಣೆ ಮಾಡುವ ಕೆಲಸವನ್ನು ಭದ್ರತಾ ಸಿಬ್ಬಂದಿ ಮಾಡುತ್ತಾರೆ.
(epaper.kannadaprabha.in)
