ಬೆಂಗಳೂರು[ಜು.03]: ಫ್ಯಾಕ್ಸ್‌ ಮೂಲಕ ರಾಜೀನಾಮೆ ತೆಗೆದುಕೊಳ್ಳಲು ನಾನು ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ನಲ್ಲಿ ಇಲ್ಲ ಎಂದು ಶಾಸಕ ರಮೇಶ್‌ ಜಾರಕಿಹೊಳಿ ವಿರುದ್ಧ ವಿಧಾನಸಭೆ ಅಧ್ಯಕ್ಷ ರಮೇಶ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ಫ್ಯಾಕ್ಸ್‌ ಮೂಲಕ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ನೀಡಿರುವ ಹೇಳಿಕೆಗೆ ಸ್ಪೀಕರ್‌ ಈ ಪ್ರತಿಕ್ರಿಯೆ ನೀಡಿದರು. ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ನಾನು ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ನಲ್ಲಿ ಇಲ್ಲ. ಯಾರ ದೊಡ್ಡಸ್ತಿಕೆಯೂ ನಡೆಯುವುದಿಲ್ಲ. ನಿಯಮಗಳು ಮಾತ್ರ ಇಲ್ಲಿ ನಡೆಯುತ್ತವೆ. ಎಲ್ಲರಿಗಿಂತ ಸಂವಿಧಾನ ದೊಡ್ಡದು ಎಂದು ಹೇಳಿದರು.

ವಿಧಾನಸಭೆಗೆ ತನ್ನದೇ ಆದ ಘನತೆ, ಗೌರವ ಇದೆ. ದನಗಳ ರೀತಿ ವರ್ತಿಸುವುದಕ್ಕೆ ಆಗುವುದಿಲ್ಲ. ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಎಚ್ಚರಿಕೆಯಿಂದ ಮಾತನಾಡಬೇಕು. ನಾನು ತಲೆಬಾಗುವುದು ಸಂವಿಧಾನದ ಆಶಯಕ್ಕೆ ಮಾತ್ರ. ಜನಪ್ರತಿನಿಧಿಗಳಿಗೆ ಮಾತನಾಡುವಾಗ ಅರಿವಿರಬೇಕು. ಚುನಾಯಿತರಾದ ಜನಪ್ರತಿನಿಧಿಗಳನ್ನು ಜನರು ವಾಪಸ್‌ ಕರೆಸಿಕೊಳ್ಳುವುದಕ್ಕೆ ಅವಕಾಶ ಇಲ್ಲ. ಜನರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಕಿಡಿಕಾರಿದರು.

ತಮ್ಮನ್ನು ಭೇಟಿ ಮಾಡಲು ಬೇರೆ ಶಾಸಕರು ಸಮಯ ಕೇಳಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕಿಯೆ ನೀಡಿದ ಅವರು, ನನ್ನ ಭೇಟಿಗೆ ಯಾವ ಶಾಸಕರೂ ಸಮಯ ಕೇಳಿಲ್ಲ. ಒಂದು ವೇಳೆ ನಿಮ್ಮ ಬಳಿ ಯಾರಾದರೂ ಶಾಸಕರು ರಾಜೀನಾಮೆ ಕೊಡಬೇಕು ಎಂದು ನನ್ನ ಭೇಟಿಗೆ ಅವಕಾಶ ಕೇಳಿದರೆ ಅವರಿಗೆ ನನ್ನ ನಂಬರ್‌ ನೀಡಿ ಎಂದು ರಮೇಶ್‌ ಕುಮಾರ್‌ ಚಟಾಕಿ ಹಾರಿಸಿದರು.