ಬೆಂಗಳೂರು [ಜು.27]:  ಪಕ್ಷೇತರ ಶಂಕರ್ ಹಾಗೂ ಕಾಂಗ್ರೆಸ್‌ನ ಇಬ್ಬರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಶೀಘ್ರವೇ ಅತೃಪ್ತರ ತಂಡದಲ್ಲಿರುವ ಜೆಡಿಎಸ್‌ನ ಮೂವರು ಶಾಸಕರನ್ನುಅನರ್ಹ ಮಾ ಡುವ ಸಾಧ್ಯತೆ ಕುರಿತು ರಾಜಕೀಯ
ವಲಯದಲ್ಲಿ ಚರ್ಚೆ ನಡೆದಿದೆ.

ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಶ್ವಾಸ ಮತ ಸಾಬೀತುಪಡಿಸುವ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮ ವಾರದಂದೇ ಸ್ಪೀಕರ್ ಅವರು ಜೆಡಿಎಸ್‌ನ ಶಾಸಕರಾದ ಮಹಾಲಕ್ಷ್ಮೀ ಬಡಾವಣೆಯ ಕೆ. ಗೋಪಾಲಯ್ಯ, ಹುಣಸೂರು ಶಾಸಕ ಎಚ್.ವಿಶ್ವನಾಥ್, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡರನ್ನು ಅನರ್ಹ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜೀನಾಮೆ ಸಲ್ಲಿಸಿರುವ ಈ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಜೆಡಿಎಸ್ ದೂರು ನೀಡಿದೆ. ಈ ಬಗ್ಗೆ ಜೆಡಿಎಸ್ ನೀಡಿರುವ ಸಾಕ್ಷ್ಯಾಧಾರಗಳನ್ನು ಸ್ಪೀಕರ್ ಪರಿಶೀಲಿಸಿದ್ದು,  ಸೋಮವಾರ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.