ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಉತ್ತರ ಪ್ರದೇಶದ ಜನರನ್ನು ದಾರಿ ತಪ್ಪಿಸುವ ಮೂಲಕ ರಾಜಕೀಯ ಅಪರಾಧವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಲಕ್ನೋ (ಫೆ.20): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭಯೋತ್ಪಾದರೆಂದು ಕರೆಯುವ ಮೂಲಕ ಸಮಾಜವಾದಿ ಪಕ್ಷ ಮುಖಂಡ ವಿವಾದವನ್ನು ಸೃಷ್ಟಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಉತ್ತರ ಪ್ರದೇಶದ ಜನರನ್ನು ದಾರಿ ತಪ್ಪಿಸುವ ಮೂಲಕ ರಾಜಕೀಯ ಅಪರಾಧವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಜನರು ರಾಜಕಾರಣಕ್ಕೆ ಎಂದಿಗೂ ಅಗೌರವ ತೋರಿಸುವವರಲ್ಲ, ಅವರಿಗೆ ರಾಜಕೀಯ ಚೆನ್ನಾಗಿ ತಿಳಿದಿದೆ, ಅವರನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಚೌಧರಿ ಎಚ್ಚರಿಸಿದ್ದಾರೆ.

ಬಿಜೆಪಿಯನ್ನು ಗೆಲ್ಲಿಸಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಧಾರ್ಮಿಕ ಭಾವನೆಗಲನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದ ಮತದಾರರು ಬಿಜೆಪಿ ಹಾಗೂ ಅದರ ಸಿದ್ಧಾಂತವನ್ನು ಚೆನ್ನಾಗಿ ಬಲ್ಲರು; ಅವರ ತಂತ್ರಗಳಿಗೆ ರಾಜ್ಯದ ಜನರು ಎಂದಿಗೂ ಬಲಿಯಾಗುವುದಿಲ್ಲವೆಂದು ಅವರು ಹೇಳಿದ್ದಾರೆ.

ಇನ್ನೊಂದು ಕಡೆ, ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ವಿರುದ್ಧ ದೂರು ಸಲ್ಲಿಸಲು ನಿರ್ಧರಿಸಿದೆ. ನಿನ್ನೆ ಫತೇಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತಾಡುತ್ತಿದ್ದ ವೇಳೆ ಪ್ರಧಾನಿ ಆಡಿರುವ ಮಾತುಗಳು ಆಕ್ಷೇಪಾರ್ಹವಾಗಿವೆ ಎಂದು ಅದು ಹೇಳಿದೆ.