ಲಕ್ನೋ(ಜೂ.04): ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಸೆಣೆಸಿದ್ದ ಎಸ್‌ಪಿ-ಬಿಎಸ್‌ಪಿ, ಘಟಬಂಧನ್ ಮುರಿದುಕೊಂಡಿವೆ. 

ಈ ಕುರಿತು ಖುದ್ದು ಮಾಹಿತಿ ನೀಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

ಎಸ್‌ಪಿ ಜೊತೆಗಿನ ಮೈತ್ರಿ ಪಕ್ಷದ ತಪ್ಪು ನಿರ್ಧಾರ ಎಂದಿರುವ ಮಾಯಾವತಿ, ಘಟಬಂಧನ್‌ನಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಮೈತ್ರಿ ಕಡಿತ ತಾತ್ಕಾಲಿಕ ಎಂದಿರುವ ಮಾಯಾವತಿ, ಭವಿಷ್ಯದಲ್ಲಿ ಮತ್ತೆ ಎಸ್‌ಪಿ ಜೊತೆ ಮೈತ್ರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಘಟಬಂಧನ್ ಮುರಿದು ಬಿದ್ದ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್‌ಪಿಗೆ ಮೈತ್ರಿ ಬೇಡವಾದರೆ ಪರವಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಿ ಜಯಗಳಿಸಲಿದೆ ಎಂದಿರುವ ಅಖಿಲೇಶ್, ಗಟಬಂಧನ್ ಮುರಿದು ಬಿದ್ದಿರುವುದರಿಂದ ಯಾವುದೇ ಪರಿಣಾಮ ಆಗದು ಎಂದು ಅಭಿಪ್ರಾಯಪಟ್ಟಿದ್ದಾರೆ.