ಕರ್ನಾಟಕ ಗಂಡ್ ಮಕ್ಳಿಗೆ ಇಲ್ಲಿದೆ ಒಂದು ಆಘಾತಕಾರಿ ವಿಚಾರ, ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಸದ್ಯ ಸಾವಿರ ಗಂಡು ಮಕ್ಕಳಿಗೆ  ಕೇವಲ 896 ಹೆಣ್ಣು ಮಕ್ಕಳಿದ್ದಾರೆ. 

ನವದೆಹಲಿ: ಪಂಜಾಬ್‌ ಮತ್ತು ಹರ್ಯಾಣದಂಥ ರಾಜ್ಯಗಳಲ್ಲಿ ಸಾಮಾನ್ಯವಾಗಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸ ಇರುತ್ತದೆ. ಆದರೆ ಅಚ್ಚರಿ ಎಂಬಂತೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ ಭಾರೀ ಪ್ರಮಾಣದಲ್ಲಿ ಕುಸಿದಿದೆ ಎಂಬ ಅಂಶ ಕೇಂದ್ರ ಸರ್ಕಾರದ ವರದಿಯೊಂದು ತಿಳಿಸಿದೆ. 2007ರಿಂದ 2016 ನಡುವೆ ಈ ವರದಿಯಲ್ಲಿ ದಕ್ಷಿಣ ಭಾರತದ ಕೇರಳ ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಲಿಂಗಾನುಪಾತ ಭಾರೀ ಪ್ರಮಾಣದಲ್ಲಿ ಕುಸಿದಿದೆ ಎಂದು ರಿಜಿಸ್ಟ್ರಾರ್‌ ಜನಲರ್‌ ಆಫ್‌ ಇಂಡಿಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತವು 1004ರಿಂದ 896ಕ್ಕೆ ಕುಸಿದಿದೆ. ಇನ್ನು 2013ರಲ್ಲಿ ಆಂಧ್ರಪ್ರದೇಶದಿಂದ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಿದ ತೆಲಂಗಾಣದಲ್ಲಿ 954ರಷ್ಟಿದ್ದ ಹೆಣ್ಣು ಮಕ್ಕಳ ಜನನ ಪ್ರಮಾಣವು 881ಕ್ಕೆ ಕುಸಿದಿದೆ. ಅಲ್ಲದೆ, ಆಂಧ್ರಪ್ರದೇಶದಲ್ಲಿಯೂ 971ರಷ್ಟಿದ್ದ ಹೆಣ್ಣು ಮಕ್ಕಳ ಜನನವು 2016ರಲ್ಲಿ 806ಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ.

ಲಿಂಗಾನುಪಾತ ಇಳಿಮುಖ ಸಮಸ್ಯೆ ಬಗ್ಗೆ ಕಳೆದ ಒಂದು ದಶಕದಿಂದ ಕಾರ್ಯ ನಿರ್ವಹಿಸಿದ ಸಾಬು ಜಾಜ್‌ರ್‍ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಲಿಂಗಾನುಪಾತ ನಾಟಕೀಯ ರೀತಿಯಲ್ಲಿ ಕುಸಿತ ಕಂಡಿರುವುದು ಗಂಭೀರ ವಿಚಾರ ಹಾಗೂ ವಾಸ್ತವದ ಸಂಗತಿಯಾಗಿದೆ. ಅಲ್ಲದೆ, ಕೆಲವು ರಾಜ್ಯಗಳ ಮಕ್ಕಳ ಜನನದ ಕುರಿತು ನೋಂದಣಿ ಮಾಡಿಸದೇ ಇರುವುದು ಲಿಂಗಾನುಪಾತ ಕುಸಿತಕ್ಕೆ ಕಾರಣವಾಗಿರಬಹುದು,’ ಎಂದಿದ್ದಾರೆ.

ರಾಜ್ಯಗಳು ಗಂಡು ಮಕ್ಕಳ ಸಂಖ್ಯೆ ಹೆಣ್ಣು ಮಕ್ಕಳ ಸಂಖ್ಯೆ

ಆಂಧ್ರಪ್ರದೇಶ 1000 806

ರಾಜಸ್ಥಾನ 1000 806

ಉತ್ತರಾಖಂಡ್‌ 1000 825

ಬಿಹಾರ 1000 837

ತಮಿಳುನಾಡು 1000 840

ತ್ವರಿತವಾಗಿ ಲಿಂಗಾನುಪಾತ ಕುಸಿದ ರಾಜ್ಯಗಳು

ರಾಜ್ಯಗಳು 2007 2016 ಬದಲಾವಣೆ ಪ್ರಮಾಣ

ಆಂಧ್ರಪ್ರದೇಶ 974 806 -168

ಕರ್ನಾಟಕ 1004 896 -108

ತಮಿಳುನಾಡು 935 840 -95

ಒಡಿಶಾ 919 858 -61

ಉತ್ತರಾಖಂಡ್‌ 869 825 -44