ಮೈಸೂರು [ಸೆ.03]:  ‘ಕೇಂದ್ರ ನೆರೆ ಪರಿಹಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಬಳಿ ನಿಯೋಗ ಹೋಗಲು ನಾವು ತಯಾರಾಗಿದ್ದೇವೆ’ ಎಂಬ ವಿರೋಧ ಪಕ್ಷಗಳ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ನೆರೆ ಪರಿಹಾರಕ್ಕೆ ಯಾರ ಇನ್‌ಫ್ಲುಯೆನ್ಸ್‌ (ಪ್ರಭಾವ) ಕೂಡ ಬೇಕಾಗಿಲ್ಲ, ಯಾವ ಪಕ್ಷದವರೂ ಗೊಂದಲ ಉಂಟು ಮಾಡುವ ಅಗತ್ಯವಿಲ್ಲ’ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಬಳಿ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲ ಎಂದಾದಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ನಾನು ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದ್ದರು. ಹಾಗೂ ಸಚಿವ ಎಚ್‌.ಡಿ.ರೇವಣ್ಣ ಕೂಡ ಇದೇ ರೀತಿಯ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ಮೇಲಿನ ಮಾತುಗಳನ್ನು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ವಿಚಾರದಲ್ಲಿ ಯಾವ ಪಕ್ಷದವರೂ ಗೊಂದಲ ಉಂಟುಮಾಡುವ ಅಗತ್ಯವಿಲ್ಲ. ಯಾರೂ ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ಧಿವಂತರಾಗಿದ್ದು, ಅವರಿಗೆ ರಾಜ್ಯದ ಪರಿಸ್ಥಿತಿ ಗೊತ್ತಿದೆ. ಶೀಘ್ರದಲ್ಲಿ ಪರಿಹಾರ ಘೋಷಣೆ ಮಾಡುತ್ತಾರೆ. ನಾನು ಅಮಿತ್‌ ಶಾ ಅವರಿಗೆ ಎಲ್ಲವನ್ನು ಮನವರಿಕೆ ಮಾಡಿ ಬಂದಿದ್ದೇನೆ ಎಂದು ತಿಳಿಸಿದರು.